ಚಾಕುವಿನಿಂದ ಇರಿದು ನರ್ಸ್ ಹತ್ಯೆ!

ಭಾನುವಾರ, 13 ಆಗಸ್ಟ್ 2023 (15:03 IST)
ಪಾಟ್ನಾ : ವ್ಯಕ್ತಿಯೋರ್ವ ನರ್ಸ್ ಅನ್ನು ಚಾಕುವಿನಿಂದ ಹಲವು ಬಾರಿ ಇರಿದು ಕೊಂದ ಬಳಿಕ ಅಲ್ಲಿಂದ ಪರಾರಿಯಾದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಮೃತ ನರ್ಸ್ ಅನ್ನು ಸೋನಿ ಕುಮಾರಿ (25) ಎಂದು ಗುರುತಿಸಲಾಗಿದ್ದು, ಕೌಟುಂಬಿಕ ದ್ವೇಷದ ಹಿನ್ನೆಲೆ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಗರದ ಜನನಿಬಿಡ ತಾಣವಾದ ಪಾಟ್ನಾದ ಕಂಕರ್ಬಾಗ್ನಲ್ಲಿ ಶನಿವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಘಟನೆ ನಡೆದಿದೆ.

ಘಟನೆಯಲ್ಲಿ ನರ್ಸ್ ತೀವ್ರ ಗಾಯಗೊಂಡಿದ್ದು, ಕೂಡಲೇ ದಾರಿಹೋಕರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಈಕೆ ಪೂರ್ಣಿಯಾ ಮೂಲದವಳಾಗಿದ್ದು, ಪಾಟ್ನಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ವರದಿಗಳು ತಿಳಿಸಿವೆ. 

ನರ್ಸ್ ಆಸ್ಪತ್ರೆಯಲ್ಲಿ ತನ್ನ ಕೆಲಸ ಮುಗಿಸಿ ಹಾಸ್ಟೆಲ್ಗೆ ತೆರಳುತ್ತಿದ್ದ ಸಂದರ್ಭ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ