ನವದೆಹಲಿ(ಮಾ.14): ರಕ್ಷಣಾ ಖಾತೆ ತೊರೆದಿರುವ ಮನೋಹರ್ ಪರಿಕ್ಕರ್ ಗೋವಾ ಸಿಎಂ ಆಗಿಯೇ ಬಿಟ್ಟರೂ ಎನ್ನುವಷ್ಟರಲ್ಲಿ ಗೋವಾ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿಯನ್ನ ಸರ್ಕಾರ ರಚನೆಗೆ ಆಹ್ವಾನಿಸಿದ ಗವರ್ನರ್ ಮೃದುಲಾ ಸಿನ್ಹಾ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದ ಏಕೈಕ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಮೊದಲ ಅವಕಾಶ ನೀಡಬೇಕು. ಆದರೆ, ಗವರ್ನರ್ 2ನೇ ಸ್ಥಾನದಲ್ಲಿರುವ ಬಿಜೆಪಿಗೆ ಅವಕಾಶ ಕಲ್ಪಿಸಿರುವುದು ಕಾನೂನು ಬಾಹಿರ ಎಂದು ಕಾಂಗ್ರೆಸ್ ವಾದಿಸಿದ್ದು, ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಸುಪ್ರೀಂಕೋರ್ಟ್`ನಲ್ಲಿ ಇಂದು ಅರ್ಜಿ ವಿಚಾರಣೆಗೆ ಬರುತ್ತಿದ್ದು, ರಾಜಕೀಯವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಇಂದು ಸಂಜೆ 5 ಗಂಟೆಗೆ ಯೋಜಿಸಲಾಗಿರುವ ಮನೋಹರ್ ಪರಿಕ್ಕರ್ ಪ್ರಮಾಣವಚನ ಕಾರ್ಯಕ್ರಮವನ್ನೂ ರದ್ದುಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ್ ಕಾವ್ಳೇಕರ್ ಕೋರಿದ್ದಾರೆ.
40 ಸದಸ್ಯ ಬಲದ ಗೋವಾದ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗೆದ್ದಿದ್ದರೆ, ಬಿಜೆಪಿ ಕೇವಲ 13 ಸ್ಥಾನ ಗೆದ್ದಿದೆ. ಇತರರು 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.