ಮಹಿಳೆಯರಿಗೆ ಬಾಡಿಗೆ ನೀಡಿದ ಮನೆಯಲ್ಲಿ ಹಿಡನ್ ಕ್ಯಾಮರಾ ಅಳವಡಿಸಿದ ಮಾಲೀಕ ಅರೆಸ್ಟ್

ಬುಧವಾರ, 5 ಡಿಸೆಂಬರ್ 2018 (06:55 IST)
ಚೆನ್ನೈ : ಮಹಿಳೆಯರೇ ಬಾಡಿಗೆಗಾಗಿ ಮನೆ ಪಡೆಯುವ ಮೊದಲು ಎಚ್ಚರವಹಿಸಿ. ಯಾಕೆಂದರೆ ಮಹಿಳೆಯರಿಗೆ ಬಾಡಿಗೆ ನೀಡಿದ್ದ ಮನೆಯ ಕೋಣೆಗಳಲ್ಲಿ ಮಾಲೀಕ ಹಿಡನ್ ಕ್ಯಾಮೆರಾ ಅಳವಡಿಸಿದ್ದ ಘಟನೆ ಚೆನ್ನೈನ ಆಡಂಬಾಕಂನಲ್ಲಿ ನಡೆದಿದೆ.


ಕೇರಳ ಮೂಲದ ಸಂಪತ್ ಕುಮಾರ್ ಅಲಿಯಾಸ್ ಸಂಜಯ್ ಇಂತಹ ನೀಚ ಕೃತ್ಯ ಎಸಗಿದ ಮಾಲೀಕನಾಗಿದ್ದು, ಈತ ಚೆನ್ನೈನ ಆಡಂಬಾಕಂನಲ್ಲಿ ಇರುವ ತನ್ನ ಅಪಾರ್ಟ್ ಮೆಂಟ್‍ ನ್ನು ಏಳು ಜನ ಉದ್ಯೋಗಸ್ಥ ಮಹಿಳೆಯರಿಗೆ ಬಾಡಿಗೆ ನೀಡಿದ್ದಾನೆ. ಮಹಿಳೆಯರು ಕೆಲಸಕ್ಕೆ ಹೋದಾಗ ದುರಸ್ತಿ ಕೆಲಸದ ನೆಪ ಹೇಳಿ ಸಂಜಯ್ ಮನೆಯೊಳಗೆ ಹೋಗಿ ಹಿಡನ್ ಕ್ಯಾಮೆರಾ ಅಳವಡಿಸಿದ್ದಾನೆ.


ಮನೆಯಲ್ಲಿ ವಾಸವಿದ್ದವರಲ್ಲಿ ಓರ್ವ ಮಹಿಳೆ ತನ್ನ ಹೇರ್ ಡ್ರೈಯರ್ ದುರಸ್ತಿಯಾಗಿದ್ದರಿಂದ ಪವರ್ ಪ್ಲಗ್‍ನ ಸಾಕೇಟ್ ತೆರೆದಿದ್ದಾಳೆ. ಈ ವೇಳೆ ಅದರಲ್ಲಿ ಸಣ್ಣ ಕ್ಯಾಮೆರಾ ಇರುವುದು ತಿಳಿದುಬಂದಿದೆ. ಮಾಲೀಕನ ಮೇಲೆ ಅನುಮಾನ ವ್ಯಕ್ತಪಡಿಸಿದ ಮಹಿಳೆಯರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯರು ವಾಸವಿದ್ದ ಮನೆಯನ್ನು ಪರಿಶೀಲಿಸಿದಾಗ ಬೆಡ್ ರೂಮ್, ಬೆಡ್ ಲ್ಯಾಂಪ್ಸ್ ಹಾಗೂ ಸ್ನಾನದ ಕೊಣೆಯಲ್ಲಿ ಬಟ್ಟೆ ಹಾಕುವ ರಾಡ್ ಸೇರಿದಂತೆ ಹಲವು ಕಡೆಗಳಲ್ಲಿ ಹಿಡನ್ ಕ್ಯಾಮೆರಾಗಳು ಪತ್ತೆಯಾಗಿವೆ. ತಕ್ಷಣವೇ ಪೊಲೀಸರು ಅಪಾರ್ಟ್ ಮೆಂಟ್ ಮಾಲೀಕ ಸಂಜಯ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ