ನವದೆಹಲಿ : ದೇಶದ ನಾನಾ ಕೈಗಾರಿಕಾ ವಲಯಗಳ ನಡುವೆ ಅಡೆತಡೆಯಿಲ್ಲದ ಸಂಪರ್ಕ ಕಲ್ಪಿಸಲು, ದೇಶದ ನಾನಾ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯ ಸಂಬಂಧಿತ ಯೋಜನೆಗಳನ್ನು 2025ರೊಳಗೆ ಪೂರ್ಣಗೊಳಿಸಲು ಹಾಗೂ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯ ಗುರಿಯನ್ನು ಈಡೇರಿಸುವ ಉದ್ದೇಶದಿಂದ “ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಎಂಬ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದೇ 13ರಂದು ಈ ಆನ್ಲೈನ್ ಪೋರ್ಟಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಯೋಜನೆಗಾಗಿ, 100 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಯೋಜನೆಯ ಗುರಿಗಳನ್ನು ಈಡೇರಿಸಲು ಕೇಂದ್ರ ಸರ್ಕಾರದ ಒಟ್ಟು 16 ಇಲಾಖೆಗಳು ಈ ಯೋಜನೆಯಲ್ಲಿ ಕೈ ಜೋಡಿಸುತ್ತಿರುವುದು ವಿಶೇಷ. ಭಾರತದ ಆಡಳಿತ ವೈಖರಿಯಲ್ಲಿ ಹಿಂದೆಂದೂ ಕಾಣದಂಥ ಮಹತ್ವದ ಬದಲಾವಣೆಯನ್ನು ಗತಿಶಕ್ತಿ ಯೋಜನೆ ನಿರೂಪಿಸಲಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿಗಳು ಬಣ್ಣಿಸಿದ್ದಾರೆ.