ಜಯಲಲಿತಾರ ಎಲ್ಲ ಖಾತೆಗಳು ಪನೀರ್ ಸೆಲ್ವಂ ಹೆಗಲಿಗೆ

ಬುಧವಾರ, 12 ಅಕ್ಟೋಬರ್ 2016 (14:50 IST)
ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಜಯಲಲಿತಾ ಅವರು ನಿರ್ವಹಿಸುತ್ತಿದ್ದ ಎಲ್ಲಾ ಖಾತೆಗಳನ್ನು ಹಣಕಾಸು ಸಚಿವ ಪನೀರ್ ಸೆಲ್ವಂ ವಹಿಸಿಕೊಂಡಿದ್ದಾರೆ. 
ಜಯಾ ಅವರು ನಿರ್ವಹಿಸುತ್ತಿದ್ದ ಗೃಹ, ಕಂದಾಯ, ಸಾರ್ವಜನಿಕ ಆಡಳಿತ ಸೇವೆ, ಅರಣ್ಯ ಖಾತೆ ಸೇರಿದಂತೆ ಎಲ್ಲ ಖಾತೆಗಳ ಜವಾಬ್ದಾರಿಯನ್ನು ರಾಜ್ಯಪಾಲ ವಿದ್ಯಾಸಾಗರ್ ರಾವ್, ಸೆಲ್ವಂ ಅವರಿಗೆ ವಹಿಸಿದ್ದಾರೆ. 65 ವರ್ಷದ ಸೆಲ್ವಂ ಸಂಪುಟ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 
 
ಮುಖ್ಯಮಂತ್ರಿ ಜಯಲಲಿತಾ ಅವರ ಸಲಹೆಯಂತೆ ಈ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಆಸ್ಪತ್ರೆಯಲ್ಲಿದ್ದರೂ ಜಯಾ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಅವರು ಗುಣಮುಖರಾಗಿ ಪುನಃ ಕಾರ್ಯಭಾರ ಸಂಭಾಳಿಸಿದ ಬಳಿಕ ಎಲ್ಲ ಖಾತೆಗಳು ಮರಳಿ ಜಯಾ ಅವರಿಗೆ ಹಸ್ತಾಂತರವಾಗಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 
 
ಜಯಲಲಿತಾ, ಸಾರ್ವಜನಿಕ, ಭಾರತೀಯ ಆಡಳಿತಾತ್ಮಕ ಸೇವೆ, ಭಾರತೀಯ ಪೊಲೀಸ್ ಸೇವೆ, ಭಾರತೀಯ ಅರಣ್ಯ ಸೇವೆ, ಸಾಮಾನ್ಯ ಆಡಳಿತ, ಜಿಲ್ಲಾ ಕಂದಾಯ ಅಧಿಕಾರಿಗಳು, ಪೊಲೀಸ್ ಮತ್ತು ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದರು. 
 
ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಆಸ್ಪತ್ರೆ ಸೇರಿದಾಗ ಇದೇ ಪನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಶುದ್ಧ ಹಸ್ತರು, ಸೌಮ್ಯ ಗುಣದವರು ಎಂದು ಗುರುತಿಸಿಕೊಳ್ಳುವ ಅವರು ಜಯಾ ಪರಮಾಪ್ತರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ