ಲಕ್ನೋ: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅನ್ನ ಹಾಕಿದವರನ್ನು ಎಂದಿಗೂ ಅದು ಮರೆಯಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ನಾಯಿ ಅದನ್ನು ಸುಳ್ಳು ಮಾಡಿದೆ. ಜೊತೆಗೆ ಮನೆ ಒಳಗೆ ಮನೆ ಮಗುವಿನ ಹಾಗೆ ನಾಯಿ ಸಾಕುವವರಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ.
ಲಕ್ನೋದಲ್ಲಿ ಮಹಿಳೆಯೊಬ್ಬಳು ತನ್ನ ಸಾಕು ನಾಯಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ್ದಾಳೆ. 84 ವರ್ಷದ ನಿವೃತ್ತ ಟೀಚರ್ ಮತ್ತು ಜಿಮ್ ಟ್ರೈನರ್ ಆಗಿದ್ದ ಮಗ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಒಂದು ಪಿಟ್ ಬುಲ್ ಜಾತಿಯದ್ದು ಇನ್ನೊಂದು ಲ್ಯಾಬ್ರೆಡಾರ್. ಈ ಪೈಕಿ ಪಿಟ್ ಬುಲ್ ನಾಯಿ ಮನೆಯಲ್ಲಿ ಮಗನಿಲ್ಲದಾಗ ಮಹಿಳೆಯನ್ನು ಕಚ್ಚಿ ಕೊಂದೇ ಬಿಟ್ಟಿದೆ.
ಮನೆಯಲ್ಲಿ ನಾಯಿಗಳು ಬೊಗಳುವ ಸದ್ದು, ಮಹಿಳೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿದ್ದಾರೆ. ಆದರೆ ಮನೆ ಒಳಗಿನಿಂದ ಲಾಕ್ ಆಗಿದ್ದರಿಂದ ಅವರಿಗೆ ಮಹಿಳೆಯನ್ನು ರಕ್ಷಿಸಲಾಗಲಿಲ್ಲ. ಬೆಳಗಿನ 6 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮಗನೂ ಮನೆಯಲ್ಲಿರಲಿಲ್ಲ.
ಹೀಗಾಗಿ ತಕ್ಷಣವೇ ಮಗನನ್ನು ಕರೆಸಿ ಬಾಗಿಲು ತೆಗೆಸಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮರಣೋತ್ತರ ಪರೀಕ್ಷೆ ವೇಳೆ ಮಹಿಳೆಗೆ ನಾಯಿ 12 ಬಾರಿ ಕಚ್ಚಿ ತೀವ್ರ ಗಾಯಗೊಳಿಸಿರುವುದು ತಿಳಿದುಬಂದಿದೆ. ಒಂಟಿಯಾಗಿದ್ದ ಮಹಿಳೆ ಮೇಲೆ ಸಾಕು ನಾಯಿಯೇ ಈ ರೀತಿ ಬರ್ಬರವಾಗಿ ದಾಳಿ ಮಾಡಿ ಕೊಲೆ ಮಾಡಿರುವುದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.