ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಧ್ವಜಕ್ಕೆ ಅಪಮಾನ ಪ್ರಕರಣ ದಾಖಲು

ಶುಕ್ರವಾರ, 1 ಜುಲೈ 2016 (16:08 IST)
ಕಳೆದ ವರ್ಷ ಯೋಗಾ ದಿನದಂದು (ಜೂನ್ 21, 2015) ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಬಿಹಾರದ ಮುಜಪ್ಫರ್ ನಗರದ ವ್ಯಕ್ತಿಯೋರ್ವ ಪ್ರಧಾನಿ ಮೋದಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾನೆ. 

ಇಲ್ಲಿನ ಪೊಖರೈರ ಗ್ರಾಮದ ನಿವಾಸಿ ಪ್ರಕಾಶ್ ಕುಮಾರ್ ಬುಧವಾರ ಬಿಹಾರದ ಮುಜಫ್ಪರ್‌ಪುರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾನೆ. 
 
2015 ಜೂನ್ 21ರಂದು ನಡೆದ ಅಂತಾರಾಷ್ಟ್ರೀಯ ಯೋಗ ದಿನದ ವೇಳೆ ಮೋದಿ ತ್ರಿವರ್ಣ ಧ್ವಜವನ್ನು ಕೇವಲ ಒಂದು ಬಟ್ಟೆ ತುಂಡಿನಂತೆ ಉಪಯೋಗಿಸಿದ್ದಾರೆ. ಅದರ ಮೇಲೆ ಕುಳಿತಿದ್ದಾರೆ ಮತ್ತು ಅದರಿಂದ ಮುಖ ಮತ್ತು ಕೈ ಒರೆಸಿಕೊಳ್ಳುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
 
ಮೋದಿ ತ್ರಿವರ್ಣ ಧ್ವಜದ ಬಣ್ಣ ಹೋಲುವ ಶಾಲಿನಿಂದ ಮುಖ ಒರೆಸಿಕೊಳ್ಳುವ ಹಲವು ಫೋಟೋಗಳನ್ನು ಅಂತರ್ಜಾಲದಿಂದ ಪಡೆದು  ದೂರಿನ ಜತೆ ಲಗತ್ತಿಸಲಾಗಿದೆ.
 
‘ಮೋದಿ ಅವರ ಈ ನಡೆ ದೇಶದ ಮಿಲಿಯನ್ ಜನರಿಗೆ ನೋವುಂಟುಮಾಡಿದೆ’ ಎಂದೂ ದೂರುದಾರ ಪ್ರಕಾಶ್ ಕುಮಾರ್ ಹೇಳಿದ್ದಾನೆ.
 
ಜುಲೈ 16 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಅರ್ಜಿದಾರನ ಪರ ವಕೀಲ ರತನ್ ಕುಮಾರ್ ತಿಳಿಸಿದ್ದಾರೆ.  
ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ಏಪ್ರಿಲ್‌ನಲ್ಲಿಯೂ ಆಶಿಶ್ ಶರ್ಮಾ ಎಂಬುವವರು ಪ್ರಧಾನಿ ಮೋದಿ ವಿರುದ್ಧ ಇದೇ ವಿಚಾರವಾಗಿ ಮೊಕದ್ದಮೆ ದಾಖಲಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ