ನವದೆಹಲಿ: ದೇಶದ ರಾಜಕೀಯ ಈಗ ಯಾವ ಸಿನಿಮಾಗೂ ಕಮ್ಮಿಯಿಲ್ಲದ ರೀತಿಯಲ್ಲಿ ಏಟು-ಎದಿರೇಟಿನ ರಣಾಂಗಣವಾಗಿದೆ. ನಿನ್ನೆ ಸಂಸತ್ ನಲ್ಲಿ ವೀರಾವೇಷದ ಭಾಷಣ ಮಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಇಂದು ಪ್ರಧಾನಿ ಮೋದಿ ಎದಿರೇಟು ಕೊಡಲು ಸಿದ್ಧತೆ ನಡೆಸಿದ್ದಾರೆ.
ಇಂದು ಮತ್ತು ನಾಳೆ ಸಂಸತ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಂಬಂಧ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಈ ವೇಳೆ ನಿನ್ನೆ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಇಂದು ಮೋದಿ ಪ್ರತ್ಯುತ್ತರ ನೀಡುವ ನಿರೀಕ್ಷೆಯಿದೆ. ನಿನ್ನೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸಭೆಯಲ್ಲಿ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅದರಲ್ಲೂ ರಾಹುಲ್ ಗಾಂಧಿಯಂತೂ ವಿಪಕ್ಷ ನಾಯಕನಾಗಿ ಮೊದಲ ಭಾಷಣದಲ್ಲೇ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಹಿಂದೂ ಹೆಸರು ಹೇಳಿಕೊಳ್ಳುವವರು ಪ್ರತಿನಿತ್ಯ ಹಿಂಸೆ, ಭಯ ಹುಟ್ಟಿಸುತ್ತಾರೆ ಎಂದಿದ್ದರು. ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಅಗ್ನಿವೀರ್ ಯೋಜನೆ, ನೀಟ್ ಅಕ್ರಮದ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಸ್ಪೀಕರ್ ಓಂ ಬಿರ್ಲಾರನ್ನೂ ಬಿಡದ ರಾಹುಲ್, ನೀವು ಮೋದಿಗೆ ಮಾತ್ರ ತಲೆಬಾಗಿ ನಮಸ್ಕರಿಸಿದ್ದೀರಿ. ನನಗೆ ನೇರವಾಗಿ ನಿಂತು ಕೈ ಕುಲುಕಿದಿರಿ ಎಂದು ಕೆಂಡ ಕಾರಿದ್ದರು.
ರಾಹುಲ್ ಗಾಂಧಿಯ ಎಲ್ಲಾ ಆರೋಪಗಳಿಗೆ ಪ್ರಧಾನಿ ಮೋದಿ ಇಂದು ಪ್ರತ್ಯುತ್ತರ ನೀಡುವ ನಿರೀಕ್ಷೆಯಿದೆ. ನಿನ್ನೆಯೇ ಮೋದಿ ಎರಡು ಬಾರಿ ಎದ್ದು ನಿಂತು ರಾಹುಲ್ ಮಾತುಗಳನ್ನು ಆಕ್ಷೇಪಿಸಿದ್ದರು. ಇಂದು ಮತ್ತು ನಾಳೆ ಮೋದಿ ಕೂಡಾ ಉಗ್ರಾವತಾರ ತಾಳುವ ನಿರೀಕ್ಷೆಯಿದೆ. ಇಂದು ಸಂಜೆ 4 ಗಂಟೆಗೆ ಮೋದಿ ಭಾಷಣ ಮಾಡಲಿದ್ದಾರೆ.