ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮೊದಲು ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ಮೋದಿ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ. ಮೋದಿ ಭದ್ರತೆ 2000 ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ಪ್ರತೀ ಬಾರಿ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನ ಮೋದಿ ಎರಡು ದಿನ ಶಾಂತ ಪರಿಸರದಲ್ಲಿ ಧ್ಯಾನ ಮಾಡುತ್ತಾರೆ. ಈ ಬಾರಿಯೂ ಅವರು ಅದೇ ಪರಿಪಾಟವನ್ನು ಮುಂದುವರಿಸಲಿದ್ದಾರೆ. ಜನವರಿ 4 ಕ್ಕೆ ಫಲಿತಾಂಶ ಘೋಷಣೆಯಾಗಲಿದ್ದು ಅದಕ್ಕೆ ಮೊದಲು ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ.
ಸ್ವಾಮಿ ವಿವೇಕಾನಂದರು ತಪಸ್ಸು ಮಾಡಿದ ಸ್ಥಳದಲ್ಲೇ ಮೋದಿ ಇಂದಿನಿಂದ ಜೂನ್ 1 ರ ಸಾಯಂಕಾಲದವರೆಗೆ ಏಕಾಂತವಾಗಿ ಕಳೆಯಲಿದ್ದಾರೆ. ಕಳೆದ ಎರಡೂ ಬಾರಿಯೂ ಅವರು ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನ ಧ್ಯಾನದಲ್ಲಿ ಮುಳುಗಿದ್ದರು.
2014 ರಲ್ಲಿ ಪ್ರತಾಪಘಡದಲ್ಲಿ ಮತ್ತು 2019 ರ ಲೋಕಸಭೆ ಚುನಾವಣೆಗೆ ಮೊದಲು ಕೇದರನಾಥದ ಗುಹೆಯೊಂದರಲ್ಲಿ ಎರಡು ದಿನ ಯಾರ ತಂಟೆಯೂ ಇಲ್ಲದೇ ಧ್ಯಾನ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಎರಡು ದಿನ ಧ್ಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.