ಪಿಎಂಎಫ್ಎಂಇ ಯೋಜನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಕ್ಕೆ ದ್ವಿತೀಯ ಸ್ಥಾನ
ಗುರುವಾರ, 12 ಮೇ 2022 (16:23 IST)
ಆತ್ಮ ನಿರ್ಭರ ಭಾರತ ಅಭಿಯಾನದ ಪಿಎಂಎಫ್ಎಂಇ ಯೋಜನೆಯಡಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ದ್ವಿತೀಯ ಸ್ಥಾನಗಳಿಸಿದ್ದು, ಕರ್ನಾಟಕದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಗತಿಪರ ರೈತರು ಈ ಯೋಜನೆಯ ನೆರವು ಪಡೆದು ಆಹಾರ ಸಂಸ್ಕರಣಾ ಉದ್ಯಮಿಯಾಗಲು ಸುವರ್ಣಾವಕಾಶ ಒದಗಿಸಿದೆ. ರೈತರು, , ಕಿರು ಉದ್ಯಮಿಗಳು , ರೈತ ಉತ್ಪಾದನಾ ಸಂಸ್ಥೆಗಳು , ಸ್ವಸಹಾಯ ಸಂಘಗಳು , ಸಹಕಾರಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಪ್ರಧಾನ ಮಂತ್ರಿಗಳ ಆಶಯಕ್ಕೆ ಮತ್ತಷ್ಟು ಬಲ ತುಂಬಲು ರಾಜ್ಯ ಸರ್ಕಾರವು ಯೋಜನೆಯಡಿಯಲ್ಲಿ ಶೇಕಡ 35 ರಷ್ಟು ಸಾಲ ಸಂಪರ್ಕಿತ ಸಹಾಯಧನಕ್ಕೆ ಹೆಚ್ಚುವರಿಯಾಗಿ ಶೇಕಡ 15 ರಷ್ಟು ಸಹಾಯಧನವನ್ನು ವೈಯಕ್ತಿಕ ಉದ್ದಿಮೆದಾರರಿಗೆ ಹಾಗೂ ರೈತರ ಗುಂಪುಗಳಿಗೆ ನೀಡುತ್ತಿದ್ದು , ಈ ಯೋಜನೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ . ಇದರ ಫಲವಾಗಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯವು ದೇಶದಲ್ಲಿಯೇ 2 ನೇ ಸ್ಥಾನದಲ್ಲಿದ್ದು , 340 ಉದ್ದಿಮೆಗಳಿಗೆ ಸಾಲ ಮಂಜೂರಾತಿಯಾಗಿದ್ದು , ರೂ .52.62 ಕೋಟಿ ಬಂಡವಾಳವು ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯಾಗಿದೆ.ಬೆಲ್ಲ ತಯಾರಿಕೆ , ತೆಂಗಿನ ಉತ್ಪನ್ನಗಳು , ಸಿರಿಧಾನ್ಯಗಳ ಉತ್ಪನ್ನಗಳು , ಉಪ್ಪಿನಕಾಯಿ , ಮೆಣಸಿನಕಾಯಿ , ಅಡಿಗೆ ಎಣ್ಣೆ , ಬೇಕರಿ ಉತ್ಪನ್ನಗಳು , ಹಣ್ಣು ಮತ್ತು ತರಕಾರಿ ಉತ್ಪನ್ನಗಳು , ಕಾಫಿ , ಮೀನು ಮತ್ತು ಮಾಂಸ ಉತ್ಪನ್ನಗಳು ಸೇರಿದಂತೆ ಇತ್ಯಾದಿ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಮಂಜೂರಾತಿ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 3871 ಘಟಕಗಳಿಗೆ ಸಾಲ ಮಂಜೂರಾತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.