ನನ್ನ ಅಣ್ಣ ರಾಹುಲ್ ಗಾಂಧಿ ತಳ್ಳಲು ಚಾನ್ಸೇ ಇಲ್ಲ ಎಂದ ಪ್ರಿಯಾಂಕ ಗಾಂಧಿ ವಾದ್ರಾ

Krishnaveni K

ಶುಕ್ರವಾರ, 20 ಡಿಸೆಂಬರ್ 2024 (16:21 IST)
ನವದೆಹಲಿ: ಸಂಸತ್ತಿನ ಆವರಣದಲ್ಲಿ ನಿನ್ನೆ ನಡೆದ ತಳ್ಳಾಟದಲ್ಲಿ ರಾಹುಲ್ ಗಾಂಧಿ ತಳ್ಳಿದ್ದರಿಂದಲೇ ಬಿಜೆಪಿಯ ಇಬ್ಬರು ಸಂಸದರು ಬಿದ್ದಿದ್ದಾರೆ ಎಂಬ ಆರೋಪಗಳಿಗೆ ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದಾರೆ.

ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ್ದ ಗೃಹಸಚಿವ ಅಮಿತ್ ಶಾ ವಿರುದ್ಧ ವಿಪಕ್ಷ ಸಂಸದರು ಪ್ರತಿಭಟನೆ ನಡೆಸುವಾಗ ತಳ್ಳಾಟ-ನೂಕಾಟ ನಡೆದಿದೆ. ಈ ವೇಳೆ ರಾಹುಲ್ ಗಾಂಧಿ ತಳ್ಳಿದ್ದರಿಂದಲೇ ನಾನು ಕೆಳಕ್ಕೆ ಬಿದ್ದೆ ಎಂದು ಗಾಯಗೊಂಡಿರುವ ಬಿಜೆಪಿ ಸಂಸದ ಪ್ರತಾಪ್ ಸಾರಂಗ್ ಹೇಳಿದ್ದರು. ಅದರಂತೆ ಬಿಜೆಪಿ ರಾಹುಲ್ ವಿರುದ್ಧ ದೂರನ್ನೂ ದಾಖಲಿಸಿದೆ.

ಇದೀಗ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ ‘ನನ್ನ ಅಣ್ಣ ಯಾರನ್ನೂ ತಳ್ಳಲು ಸಾಧ್ಯವೇ ಇಲ್ಲ. ಇದೆಲ್ಲಾ ಕೇಂದ್ರ ಸರ್ಕಾರದ ಹತಾಶೆಯ ಪ್ರತಿಕ್ರಿಯೆಗಳು. ರಾಹುಲ್ ಯಾರನ್ನೂ ತಳ್ಳಿ ಕೆಳಕ್ಕೆ ಬೀಳಿಸುವ ವ್ಯಕ್ತಿಯೇ ಅಲ್ಲ. ನಾನು ಅವರ ಸಹೋದರಿ. ನನಗೆ ಅವರ ಬಗ್ಗೆ ಚೆನ್ನಾಗಿ ಗೊತ್ತು. ಆತ ಇಂತಹ ಕೆಲಸ ಮಾಡಲು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ ಇದು ದೇಶದ ಜನತೆಗೂ ಗೊತ್ತು. ಆಡಳಿತ ಪಕ್ಷ ಯಾವ ಮಟ್ಟಿಗೆ ಹತಾಶೆಗೊಂಡಿದೆ ಎಂದು ಇದರಿಂದಲೇ ಗೊತ್ತಾಗುತ್ತದೆ’ ಎಂದು ಪ್ರಿಯಾಂಕ ಹೇಳಿದ್ದಾರೆ.

ವಿರೋಧ ಪಕ್ಷಗಳು ಒಗ್ಗಟ್ಟಾಗಿರುವುದನ್ನು ಸಹಿಸದೇ ರಾಹುಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಎಫ್ಐಆರ್ ಹಾಕಿದೆ. ಅಂಬೇಡ್ಕರ್ ಬಗ್ಗೆ ಅವರಿಗಿರುವ ನಿಜವಾದ ಭಾವನೆ ಹೊರಬಂದಿರುವುದನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ