ವಯನಾಡಿಗೆ ಪರಿಹಾರ ಪ್ಯಾಕೇಜ್ ನೀಡದ ಕೇಂದ್ರ: ಬೀದಿಗಿಳಿದು ಸಂಸದೆ ಪ್ರಿಯಾಂಕಾ ಗಾಂಧಿ ಹೋರಾಟ

Sampriya

ಶನಿವಾರ, 14 ಡಿಸೆಂಬರ್ 2024 (19:54 IST)
Photo Courtesy X
ನವದೆಹಲಿ: ಕೆಳ ತಿಂಗಳ ಹಿಂದೆ ಭೀಕರ ಭೂಕುಸಿತಕ್ಕೆ ತತ್ತರಿಸಿರುವ ಕೇರಳದ ವಯನಾಡು ಜಿಲ್ಲೆಯ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ಪ್ಯಾಕೇಜ್ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಆರೋಪಿಸಿ ಬೀದಿಗಿಳಿದಿದ್ದಾರೆ.

ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಸಂಸತ್ತಿನ ಆವರಣದಲ್ಲಿ ಕೇರಳದ ಸಂಸದರೊಂದಿಗೆ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಪ್ರತಿಭಟಿಸಿದ್ದಾರೆ.
ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕೇರಳದ ಸಂಸದರು ಆರೋಪ ಮಾಡಿದ್ದಾರೆ. ಕೇರಳ ಭಾರತದಲ್ಲಿದೆ, ವಯನಾಡ್‌ಗೆ ನ್ಯಾಯ ದೊರಕಿಸಿ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ವಯನಾಡಿಗೆ ವಿಶೇಷ ಪ್ಯಾಕೇಜ್ ನೀಡಲು ಕೇಂದ್ರವು ನಿರಾಕರಿಸುತ್ತಿರುವುದು ತುಂಬಾ ನಿರಾಸೆಯನ್ನುಂಟು ಮಾಡಿದೆ. ನಾವು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿದ್ದೇವೆ. ಪ್ರಧಾನ ಮಂತ್ರಿಗೂ ಪತ್ರ ಬರೆದಿದ್ದೇವೆ. ನೈಸರ್ಗಿಕ ವಿಪತ್ತು ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ವಯನಾಡಿನ ವಿನಾಶವನ್ನು ಇಡೀ ದೇಶವೇ ನೋಡಿದೆ. ಹರಿಯಾಣದಲ್ಲೂ ಇದಕ್ಕೆ ಸಮಾನವಾದ ವಿಪತ್ತು ಸಂಭವಿಸಿದೆ. ರಾಜಕೀಯದಿಂದಾಗಿ ಎರಡೂ ಕಡೆಗಳಿಗೂ ಕೇಂದ್ರ ಸರ್ಕಾರವು ನೆರವು ನೀಡುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಇದೇ ವರ್ಷ ಜುಲೈ 30ರಂದು ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ 231 ಮಂದಿ ಮೃತಪಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ