ಚಿಕನ್ ತಿಂದು ರಾಹುಲ್ ಗಾಂಧಿ ಕೈಲಾಸ ಯಾತ್ರೆ ಮಾಡಿದರೇ? ರೆಸ್ಟೋರೆಂಟ್ ನೀಡಿದ ಸ್ಪಷ್ಟನೆ ಏನು?
ಮಂಗಳವಾರ, 4 ಸೆಪ್ಟಂಬರ್ 2018 (16:04 IST)
ನವದೆಹಲಿ: ಕರ್ನಾಟಕದಲ್ಲಿ ಚುನಾವಣೆ ಪ್ರಚಾರದ ವೇಳೆ ಚಿಕನ್ ತಿಂದು ದೇವಾಲಯ ಪ್ರವೇಶಿಸಿದರು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಮತ್ತೆ ಅಂತಹದ್ದೇ ವಿವಾದಕ್ಕೆ ಸಿಲುಕಿದ್ದಾರೆ.
ಸದ್ಯಕ್ಕೆ ಕೈಲಾಸ, ಮಾನಸ ಸರೋವರ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ನೇಪಾಳ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ರೆಸ್ಟೋರೆಂಟ್ ಒಂದಕ್ಕೆ ರಾಹುಲ್ ಹೋಗಿದ್ದಾರೆ.
ಇಲ್ಲಿ ರಾಹುಲ್ ಚಿಕನ್ ಕುರ್ ಕುರೆ ತಿಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಈ ರೆಸ್ಟೋರೆಂಟ್ ನ ಸಿಬ್ಬಂದಿಯ ಮಾತುಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ರೆಸ್ಟೋರೆಂಟ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ರಾಹುಲ್ ಭೇಟಿ ಬಗ್ಗೆ ಫೋಟೋ ಪ್ರಕಟಿಸಿದೆ. ಮಾಧ್ಯಮ ವರದಿ ಪ್ರಕಾರ ರಾಹುಲ್ ಜತೆಗೆ ಇನ್ನೂ ನಾಲ್ವರಿದ್ದರು. ತಮ್ಮ ಊಟ ಮುಗಿಸಿ ರಾಹುಲ್ ತಾವೇ ಖುದ್ದಾಗಿ ಬಿಲ್ ಪಾವತಿ ಮಾಡಿದರು ಎನ್ನಲಾಗಿತ್ತು.
ಆದರೆ ಈ ವಿಚಾರ ವಿವಾದವಾಗುತ್ತಿದ್ದಂತೆ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಸ್ಪಷ್ಟನೆ ನೀಡಿರುವ ರೆಸ್ಟೋರೆಂಟ್ ರಾಹುಲ್ ಗಾಂಧಿ ಬಗ್ಗೆ ಮಾಧ್ಯಮಗಳಿಗೆ ನಮ್ಮ ರೆಸ್ಟೋರೆಂಟ್ ಸಿಬ್ಬಂದಿ ಯಾವುದೇ ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ. ಅವರು ನಾನ್ ವೆಜ್ ಸೇವಿಸಿದ್ದಾರೆಂಬುದು ಸುಳ್ಳು. ಅವರು ಶುದ್ಧ ಶಾಖಾಹಾರಿ ಆಹಾರ ಆರ್ಡರ್ ಮಾಡಿದ್ದರು. ಈ ಬಗ್ಗೆ ಓಡಾಡುತ್ತಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.