ಹೇಳಿದಂತೇ ಆಯ್ತು, ರಾಹುಲ್ ಗಾಂಧಿಗೆ ಸದ್ಯದಲ್ಲೇ ಇಡಿ ಗ್ರಿಲ್ ಗ್ಯಾರಂಟಿ

Krishnaveni K

ಸೋಮವಾರ, 12 ಆಗಸ್ಟ್ 2024 (11:59 IST)
ನವದೆಹಲಿ: ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಸದ್ಯದಲ್ಲೇ ನನ್ನ ಮೇಲೆ ಇಡಿ ದಾಳಿಯಾಗಲಿದೆ ಎಂದಿದ್ದರು. ಅದೀಗ ನಿಜವಾಗುವ ಲಕ್ಷಣವಿದೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ರಾಹುಲ್ ವಿರುದ್ಧ ಇಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಇತರರು ಸೇರಿ ಆರಂಭಿಸಿದ ಪತ್ರಿಕೆ ನ್ಯಾಷನಲ್ ಹೆರಾಲ್ಡ್. ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡಾ ಈ ಪತ್ರಿಕೆಯ ಪ್ರಮುಖ ಷೇರುದಾರರು. ಪತ್ರಿಕೆ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ನೀಡಿದ ಜಮೀನನ್ನು ಬಳಿಕ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ ಮತ್ತು ಷೇರು ಮಾರಾಟ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಇಡಿ ಆರೋಪವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2022 ರಲ್ಲಿ ರಾಹುಲ್ ಗಾಂಧಿಯನ್ನು ಇಡಿ ಕರೆಸಿಕೊಂಡು ವಿಚಾರಣೆ ನಡೆಸಿತ್ತು. ಆಗ ಕಾಂಗ್ರೆಸ್ ನಾಯಕರು ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಇನ್ನೂ ಜೀವಂತವಾಗಿದೆ. ಇದೀಗ ಮತ್ತೊಮ್ಮೆ ರಾಹುಲ್ ಗಾಂಧಿಯನ್ನು ವಿಚಾರಣೆ ನಡೆಸಲು ಇಡಿ ತಯಾರಿ ನಡೆಸಿದೆ ಎಂಬ ಮಾತು ಕೇಳಿಬರುತ್ತಿದೆ.

ಇದೀಗ ರಾಹುಲ್ ಗಾಂಧಿಯನ್ನು ಇಡಿ ವಿಚಾರಣೆ ನಡೆಸಿದರೆ ಮತ್ತೊಮ್ಮೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಆಕ್ರೋಶಗೊಳ್ಳಲಿವೆ. ಮತ್ತೊಮ್ಮೆ ಪ್ರತಿಭಟನೆಗಳು, ಆರೋಪ-ಪ್ರತ್ಯಾರೋಪಗಳು ಸಾಮಾನ್ಯವಾಗಲಿದೆ. ಇದೀಗ ರಾಹುಲ್ ಗಾಂಧಿ ಜೊತೆಗೆ ಸೋನಿಯಾ ಗಾಂಧಿಯನ್ನೂ ವಿಚಾರಣೆಗೆ ಕರೆಸಿಕೊಳ್ಳಲಿದ್ದಾರಾ ಎಂಬುದು ಗೊತ್ತಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ