ನವದೆಹಲಿ: ಉತ್ತರ ಪ್ರದೇಶದಲ್ಲಿ ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ತಂಗಿ ಪ್ರಿಯಾಂಕ ವಾದ್ರಾ ಭೇಟಿ ನೀಡಲಿದ್ದಾರೆ. ಆದರೆ ಈ ಭೇಟಿಗೆ ಮುನ್ನ ಅಣ್ಣ-ತಂಗಿ ಅಯೋಧ‍್ಯೆಯ ರಾಮಮಂದಿರಕ್ಕೆ ಭೇಟಿ ಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಮೊದಲಿನಿಂದಲೂ ಅಷ್ಟೊಂದು ಒಲವು ಹೊಂದಿರಲಿಲ್ಲ. ಇತ್ತೀಚೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಕಾಂಗ್ರೆಸ್ ನಾಯಕರು ನಯವಾಗಿ ತಿರಸ್ಕರಿಸಿದ್ದರು. ಆದರೆ ಈಗ ಉತ್ತರ ಪ್ರದೇಶದ ಅಮೇಠಿ ಮತ್ತು ರಾಯ್ ಬರೇಲಿಯಲ್ಲಿ ಅಭ್ಯರ್ಥಿಗಳ ಘೋಷಣೆಗೆ ಮುನ್ನ ರಾಹುಲ್, ಪ್ರಿಯಾಂಕ ಅಯೋಧ್ಯತೆಗೆ ಭೇಟಿ ಕೊಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇತ್ತೀಚೆಗೆ ಕಾಂಗ್ರೆಸ್ ಅಧ‍್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಸಮುದಾಯದವರಿಗೆ, ಜಾತಿ, ವರ್ಗದವರಿಗೆ ರಾಮಮಂದಿರಕ್ಕೆ ಮುಕ್ತ ಪ್ರವೇಶ ನೀಡುವವರೆಗೂ ನಾನು ಭೇಟಿ ಕೊಡಲ್ಲ ಎಂದಿದ್ದರು. ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ವಿವಾದಕ್ಕೆ ಗುರಿಯಾಗಿದ್ದವು.
ರಾಯ್ ಬರೇಲಿ ಮತ್ತು ಅಮೇಠಿಯಲ್ಲಿ ನಾಳೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಸಿಗಲಿದೆ. ಈ ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಮತ್ತು ಪ್ರಿಯಾಂಕ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಮುನ್ನ ರಾಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.