ಅಯೋಧ್ಯೆ: ಇಂದು ರಾಮನವಮಿ ನಿಮಿತ್ತ ಅಯೋಧ್ಯೆಯ ರಾಮಮಂದಿರದಲ್ಲಿ ಸೂರ್ಯ ರಶ್ಮಿ ಬಾಲರಾಮನ ಮೂರ್ತಿಯ ಹಣೆ ಸ್ಪರ್ಶಿಸಿದೆ. ಆಧುನಿಕ ತಂತ್ರಜ್ಞಾನ ಬಳಸಿ ಇಂತಹದ್ದೊಂದು ಚಮತ್ಕಾರ ಸೃಷ್ಟಿಸಲಾಗಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ವಿಜೃಂಭಣೆಯಿಂದ ರಾಮನವಮಿ ಆಚರಣೆ ನಡೆಯುತ್ತಿದೆ. ಇತ್ತೀಚೆಗಷ್ಟೇ ರಾಮಮಂದಿರ ಲೋಕಾರ್ಪಣೆಯಾಗಿತ್ತು. ಇದೇ ಮೊದಲ ಬಾರಿಗೆ ರಾಮನ ಜನ್ಮಭೂಮಿಯಲ್ಲೇ ರಾಮ ನವಮಿ ಆಚರಣೆಯಾಗುತ್ತಿರುವುದು ವಿಶೇಷ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತಜ್ಞರು ಈ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಮೂರು ಕನ್ನಡಿಗಳ ಸಹಾಯದಿಂದ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಬೀಳುವಂತೆ ಮಾಡಲಾಗಿದೆ. ಇದನ್ನು ಸಾಮಾನ್ಯ ಜನರೂ ಟಿವಿ ಮೂಲಕ ಕಣ್ತುಂಬಿಕೊಂಡಿದ್ದಾರೆ. ಇನ್ನು ಮುಂದೆ ಪ್ರತೀ ವರ್ಷವೂ ಈ ವಿದ್ಯಮಾನ ನಡೆಯಲಿದೆ. ದೂರದರ್ಶನದಲ್ಲಿ ಇದರ ಲೈವ್ ದೃಶ‍್ಯಾವಳಿ ಪ್ರಸಾರ ಮಾಡಲಾಗಿತ್ತು.
ಸೂರ್ಯ ರಶ್ಮಿಗಳು ನೇರವಾಗಿ ರಾಮನ ಹಣೆಯ ಮೇಲೆ ಬೀಳುತ್ತಿದ್ದಂತೇ ಅರ್ಚಕರು ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ. ರಾಮನವಮಿ ಆಚರಣೆ ನೋಡಲು ರಾಮಮಂದಿರದ ಸುತ್ತ ಎಲ್ ಇಡಿ ಸ್ಕ್ರೀನ್ ಅಳವಡಿಲಾಗಿದೆ. ಅಯೋಧ‍್ಯೆಯಲ್ಲಿ ಮಾಡಲಾಗಿರುವ ಈ ಪ್ರಯೋಗವನ್ನು ಈಗಾಗಲೇ ಕೆಲವು ಜೈನ ಮಂದಿರಗಳಲ್ಲಿ ಒರಿಸ್ಸಾದ ಕೊನಾರ್ಕ್ ಸೂರ್ಯ ದೇವಾಲಯದಲ್ಲೂ ಪ್ರಯೋಗಿಸಲಾಗಿದೆ.