ಅಯೋಧ್ಯೆ: ಇಂದು ದೇಶದಾದ್ಯಂತ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮನವಮಿ ನಿಮಿತ್ತ ಇಂದು ಅಯೋಧ್ಯೆ ರಾಮಜನ್ಮಭೂಮಿಯ ಮಂದಿರದಲ್ಲಿ ವಿಶೇಷ ಪೂಜೆ ಇರಲಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾದ ನಂತರ ಬರಮಾಡಿಕೊಳ್ಳಲಾಗುತ್ತಿರುವ ಮೊದಲ ರಾಮನವಮಿ ಇದು ಎಂಬುದು ವಿಶೇಷ. ಈ ಕಾರಣಕ್ಕಾಗಿಯೇ ಈ ಬಾರಿ ರಾಮನವಮಿ ಆಚರಣೆ ಮತ್ತಷ್ಟು ವಿಶೇಷವಾಗಿದೆ. ರಾಮನಿಗೆ ಜನ್ಮಭೂಮಿಯಲ್ಲೇ ಮಂದಿರ ನಿರ್ಮಿಸಲಾಗಿದ್ದು, ಆ ಸಂಭ್ರಮದಿಂದಲೇ ಇಂದು ಪೂಜೆ ನೆರವೇರಿಸಲಾಗುತ್ತಿದೆ.
ಇಂದು ಅಯೋಧ್ಯೆಯ ಬಾಲರಾಮನ ಮೂರ್ತಿಗೆ ತಂತ್ರಜ್ಞಾನದ ಸಹಾಯದಿಂದ ಸೂರ್ಯ ರಶ್ಮಿ ಬೀಳುವಂತೆ ಮಾಡಲಾಗುತ್ತದೆ. ಇದರ ಪ್ರಯೋಗವನ್ನು ಈಗಾಗಲೇ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ.
ವಿಶೇಷವೆಂದರೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತಜ್ಞರು. ಮೂರು ಕನ್ನಡಿಗಳ ಸಹಾಯದಿಂದ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಬೀಳುವಂತೆ ಮಾಡಲಾಗುವುದು. ಇದನ್ನು ಸಾಮಾನ್ಯ ಜನರೂ ಟಿವಿ ಮೂಲಕ ಕಣ್ತುಂಬಿಕೊಳ್ಳಬಹುದು.
ಇಂದು ಮಧ್ಯಾಹ್ನ 12 ಗಂಟೆಗೆ ಈ ಚಮತ್ಕಾರ ನಡೆಯಲಿದೆ. ಇದನ್ನು ದೂರದರ್ಶನ ವಾಹಿನಿ ಲೈವ್ ಆಗಿ ತೋರಿಸಲಿದೆ. ಈಗಾಗಲೇ ದೂರದರ್ಶನ ವಾಹಿನಿ ಬಾಲರಾಮನಿಗೆ ನಡೆಯುವ ಆರತಿಯನ್ನು ಲೈವ್ ಆಗಿ ತೋರಿಸುತ್ತಿದೆ. ಈ ಅದ್ಭುತ ಕ್ಷಣಕ್ಕೆ ಇಂದು ಭಕ್ತರು ಸಾಕ್ಷಿಯಾಗಲಿದ್ದಾರೆ.