ವಯನಾಡು ಕ್ಷೇತ್ರಕ್ಕೆ ರಾಹುಲ್ ಗಾಂಧಿ ರಾಜೀನಾಮೆ: ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧೆ ಸಾಧ್ಯತೆ

Sampriya

ಶುಕ್ರವಾರ, 14 ಜೂನ್ 2024 (19:21 IST)
Photo Courtesy X
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್‌ ಬರೇಲಿಯಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ ಗೆಲುವು ಸಾಧಿಸಿದ್ದಾರೆ. ಇದೀಗ ಅವರು ಈ ಹಿಂದೆ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದ ರಾಯ್‌ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರ ಕೈಹಿಡಿದಿದ್ದ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಯ್‌ ಬರೇಲಿ ಮತ್ತು ವಯನಾಡು ಎರಡೂ ಕಡೆ ರಾಹುಲ್‌ ಗಾಂಧಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ. ವಯನಾಡಿನಲ್ಲಿ ಸತತ ಎರಡನೇ ಬಾರಿ ಜಯ ಗಳಿಸಿದ ರಾವುಲ್‌ ಅಲ್ಲಿನ ಸ್ಥಾನವನ್ನು ತ್ಯಜಿಸಬೇಕಾಗಿದೆ.

ಲೋಕಸಭಾ ಚುನಾವಣೆಯ ಬಗ್ಗೆ ಈಚೆಗೆ ಮಾತನಾಡಿದ್ದ ರಾಹುಲ್‌ ಗಾಂಧಿ, ಒಂದು ವೇಳೆ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದರೆ ಮೋದಿ  2-3 ಲಕ್ಷ ಮತಗಳ ಅಂತರಿಂದ ಸೋಲುತ್ತಿದ್ದರು ಎಂದು ಹೇಳಿದ್ದರು. ಆ ಮೂಲಕ ಅವರು ಪ್ರಿಯಾಂಕಾ ಗಾಂಧಿ ಅವರ ಚೊಚ್ಚಲ ಸ್ಪರ್ಧೆಯ ಸುಳಿವು ನೀಡಿದ್ದರಾ ಎನ್ನುವ ಸಂಶಯ ಮೂಡಿದೆ.

ಆದರೆ, ಪ್ರತಿ ಚುನಾವಣೆ ಸಂದರ್ಭದಲ್ಲೂ ಪ್ರಿಯಾಂಕಾ ಗಾಂಧಿ ಹೆಸರು ಮುಂಚೂಣಿಗೆ ಬರುತ್ತಿದೆ. ಆದರೆ, ಅವರು ಸ್ಪರ್ಧೆಗೆ ಒಲವು ವ್ಯಕ್ತಪಡಿಸುತ್ತಿಲ್ಲ. ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತರಾ ಎಂಬುದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ