ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ರೈಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಉತ್ತರಪ್ರದೇಶದಲ್ಲಿ ಭಾರತ್ ನ್ಯಾಯ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅಮಿತಾಭ್ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಚ್ಚನ್ ಕುಟುಂಬ ಹೋಗಿದ್ದಕ್ಕೆ ರಾಹುಲ್ ಟಾಂಗ್ ಕೊಟ್ಟಿದ್ದಾರೆ.
ರಾಮಮಂದಿರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ನೋಡಿದ್ದೀರಾ? ಅಲ್ಲಿ ಯಾರಾದರೂ ಎಸ್ ಸಿ, ಎಸ್ ಟಿ ಅಥವಾ ಒಬಿಸಿ ಮುಖಗಳಿದ್ದರಾ? ಅಮಿತಾಭ್ ಬಚ್ಚನ್, ಐಶ್ವರ್ಯಾ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿಯಂತಹವರು ಉಪಸ್ಥಿತರಿದ್ದರು. ಆದರೆ ನಿಜವಾಗಿಯೂ ದೇಶ ಮುನ್ನಡೆಸುವವರನ್ನು ಕಾಣಲೇ ಇಲ್ಲ. ಈ ವ್ಯಕ್ತಿಗಳು ನಿಮ್ಮಂತಹವರಿಗೆ ದೇಶದಲ್ಲಿ ಅಧಿಕಾರ ಚಲಾಯಿಸಲು ಸಾಧ‍್ಯವೇ ಇಲ್ಲ ಎಂದು ಸಂದೇಶ ನೀಡಿದರು ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ್ದರು. ಈ ಕಾರ್ಯಕ್ರಮಕ್ಕೆ ನೂರಾರು ಸೆಲೆಬ್ರಿಟಿಗಳು, ಗಣ‍್ಯರು ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ವಿಪಕ್ಷ ಕಾಂಗ್ರೆಸ್ ನಯವಾಗಿ ಆಹ್ವಾನ ತಿರಸ್ಕರಿಸಿತ್ತು.
ರಾಹುಲ್ ಗಾಂಧಿ ನ್ಯಾಯ್ ಯಾತ್ರಾ ಇದೀಗ ಉತ್ತರ ಪ್ರದೇಶಕ್ಕೆ ತಲುಪಿದ್ದು, ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಪ್ರಿಯಾಂಕ ಕೂಡಾ ಸಾಥ್ ನೀಡಲಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಹುಲ್ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಮಿತ್ರ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.