ಸೇಕ್ರೆಡ್ ಗೇಮ್ಸ್ ನಲ್ಲಿ ರಾಜೀವ್ ಗಾಂಧಿಗೆ ಅವಹೇಳನ. ಈ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?
ಭಾನುವಾರ, 15 ಜುಲೈ 2018 (09:20 IST)
ನವದೆಹಲಿ : ನೆಟ್‌ಫ್ಲಿಕ್ಸ್‌ನ "ಸೇಕ್ರೆಡ್ ಗೇಮ್ಸ್'’ ವೆಬ್ ಸೀರೀಸ್‌ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವ ಬಗ್ಗೆ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕಿ ಅವರ ನೆಟ್‌ಫ್ಲಿಕ್ಸ್‌ನ "ಸೇಕ್ರೆಡ್ ಗೇಮ್ಸ್’' ವೆಬ್ ಸೀರೀಸ್‌ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕ ರಾಜೀವ್ ಕುಮಾರ್ ಸಿನ್ಹಾ ಅವರು ನಟ ಹಾಗೂ ನಿರ್ಮಾಪಕನ ವಿರುದ್ಧ ಗಿರೀಶ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಇದೀಗ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಅವರು "ನನ್ನ ಅಪ್ಪ ಭಾರತ ಕ್ಕಾಗಿಯೇ ಬದುಕಿ, ಮಡಿದವರು. ಅದನ್ನು ಬದಲಿಸಲು ಕಾಲ್ಪನಿಕ ಪಾತ್ರವೊಂದಕ್ಕೆ ಸಾಧ್ಯವಿಲ್ಲ’' ಎಂದು ರಾಹುಲ್ ಬರೆದುಕೊಂಡಿದ್ದಾರೆ. ಅದರ ಜೊತೆಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೊಲೀಸ್‌ಗಿರಿ ಮೂಲಕ ನಿಯಂತ್ರಿಸಬೇಕು ಎಂದು ಬಿಜೆಪಿ/ಆರೆಸ್ಸೆಸ್ ಭಾವಿಸುತ್ತದೆ. ಆದರೆ, ನಾವು ಈ ಸ್ವಾತಂತ್ರ್ಯವನ್ನು ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕು ಎಂದು ನಂಬಿದ್ದೇವೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ