Rajnath Singh: ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದ್ದು ಯಾರೆಂದು ಬಹಿರಂಗಪಡಿಸಿದ ರಾಜನಾಥ್ ಸಿಂಗ್
ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸರಿಯಾಗಿ ಯೋಜನೆ ರೂಪಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತು. ಈ ದಾಳಿಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿತ್ತು.
ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದಕ್ಕೇ ಇದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಯಿತು ಎಂದು ಸೇನೆ ಹಾಗೂ ಕೇಂದ್ರ ಸರ್ಕಾರ ಈಗಾಗಲೇ ಹೇಳಿತ್ತು. ಆದರೆ ಈ ಹೆಸರಿಟ್ಟಿದ್ದು ಯಾರು ಎಂದು ಇಂದು ರಾಜನಾಥ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಈ ಆಪರೇಷನ್ ಗೆ ಸಿಂಧೂರ್ ಹೆಸರು ಸೂಚಿಸಿದ್ದು ಪ್ರಧಾನಿ ಮೋದಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಗುಜರಾತ್ ನ ಭುಜ್ ವಾಯುನೆಲೆಯಲ್ಲಿ ಇಂದು ಯೋಧರನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್ ಹೆಸರು ನೀಡಿದ್ದು ಪ್ರಧಾನಿ ಮೋದಿ. ಈ ದಾಳಿ ಭಾರತೀಯರೆಲ್ಲರೂ ಹೆಮ್ಮೆಪಡುವಂತೆ ಮಾಡಿದೆ. ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣಗಳನ್ನು ಸೇನೆ ಕೇವಲ 23 ನಿಮಿಷದಲ್ಲಿ ಹೊಡೆದು ಹಾಕಿದೆ. ಬ್ರೇಕ್ ಫಾಸ್ಟ್ ಮಾಡುವಷ್ಟೇ ಸಮಯದಲ್ಲಿ ಶತ್ರುಗಳ ಕೋಟೆಯನ್ನು ಬೇಧಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.