ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ: ಮಾಸ್ಟರ್ ಮೈಂಡ್ ವಶಕ್ಕೆ

Krishnaveni K

ಶುಕ್ರವಾರ, 12 ಏಪ್ರಿಲ್ 2024 (11:30 IST)
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಎನ್ ಐಎ ಅಧಿಕಾರಿಗಳು ಪಶ್ಚಿಮ ಬಂಗಾಲದಲ್ಲಿ ಬಂಧಿಸಿದ್ದಾರೆ.

ಪ್ರಮುಖ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಪೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಪಶ್ಚಿಮ ಬಂಗಾಲದಲ್ಲಿ ಬಂಧಿಸಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉಗ್ರರು ಅಸ್ಸಾಂ ಮತ್ತು ಪಶ್ಚಿಮ ಬಂಗಾಲದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಭಯೋತ್ಪಾದಕರನ್ನು ಪಶ್ಚಿಮ ಬಂಗಾಲದಲ್ಲಿ ವಶಕ್ಕೆ ಪಡೆಯಲಾಗಿದೆ. ಆದರೆ ಇನ್ನೂ ಎನ್ ಐಎ ಅಧಿಕಾರಿಗಳು ಈ ವಿಚಾರವನ್ನು ಖಚಿತಪಡಿಸಬೇಕಿದೆ.

ಬಾಂಬರ್ ಮುಸ್ಸಾವಿರ್ ಕರ್ನಾಟಕ ಮೂಲದವನಾಗಿದ್ದು, ಮಲೆನಾಡು ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕೆಯಿದೆ. ಸದ್ಯಕ್ಕೆ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ನ್ಯಾಯಾಲಯ ಮುಂದಿನ ವಿಚಾರಣೆಗಾಗಿ ಎನ್ ಐಎ ವಶಕ್ಕೆ ಒಪ್ಪಿಸುವ ಸಾಧ‍್ಯತೆಯಿದೆ.  ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕ್ಯಾಪ್ ಧರಿಸಿ ಬಂದಿದ್ದ ಉಗ್ರ ಬ್ಯಾಗ್ ನಲ್ಲಿ ಟೈಮರ್ ಬಾಂಬ್ ಇಟ್ಟು ಸ್ಪೋಟಿಸಿದ್ದ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು. ಬಳಿಕ ಈ ದಾಳಿಯ ತನಿಖೆಯನ್ನು ಎನ್ ಐಎ ವಹಿಸಿಕೊಂಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ