ರಂಗೇರಿದ ಹರಿಯಾಣ ಚುನಾವಣಾ ಅಖಾಢ: ಕುಸ್ತಿಪಟು ವಿನೇಶ್‌ ವಿರುದ್ಧ ಕ್ಯಾಪ್ಟನ್‌ ಕಣಕ್ಕೆ

Sampriya

ಮಂಗಳವಾರ, 10 ಸೆಪ್ಟಂಬರ್ 2024 (19:18 IST)
Photo Courtesy X
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದೆ. ಭಾರತೀಯ ಜನತಾ ಪಕ್ಷ ಇಂದು ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ದೇಶದ ಕುತೂಹಲ ಕೆರಳಿಸಿರುವ ಜೂಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಖ್ಯಾತ ಕುಸ್ತಿಪಟು ವಿನೇಶ್‌ ಫೋಗಟ್‌ ವಿರುದ್ಧ ಬಿಜೆಪಿ ಕ್ಯಾಪ್ಟನ್‌ ಯೋಗೇಶ್‌ ಬೈರಾಗಿ ಅವರನ್ನು ಕಣಕ್ಕೆ ಇಳಿಸಿದೆ.

ಕ್ಯಾಪ್ಟನ್‌ ಯೋಗೇಶ್‌ ಬೈರಾಗಿ ಅವರು ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷರಾಗಿ ಮತ್ತು ಪಕ್ಷದ ಹರಿಯಾಣ ಕ್ರೀಡಾ ವಿಭಾಗದ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.

ವಿನೇಶ್‌ ಅವರ ವಿರುದ್ಧ ಅವರ ದೊಡ್ಡಪ್ಪ ಮಗಳು, ಖ್ಯಾತ ಕುಸ್ತಿಪಟು ಬಬಿತಾ ಫೋಗಾಟ್‌ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂಬ ಚರ್ಚೆಯ ಬೆನ್ನಲ್ಲೇ ಕ್ಯಾಪ್ಟನ್‌ ಹೆಸರನ್ನು ಅಂತಿಮಗೊಳಿಸಲಾಗಿದೆ.

ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರಿಗೆ ನಿಕಟವಾಗಿರುವ ಪವನ್‌ ಸೈನಿ ಅವರನ್ನು ನರೈನ್‌ ಗಢ್‌ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಸತ್ಪಾಲ್‌ ಜಂಬಾ ಅವರನ್ನು ಪುಂಡ್ರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದೆ.

ಯೋಗೇಂದ್ರ ರಾಣಾ ಅವರನ್ನು ಅಸ್ಸಾಂಧ್‌ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಬಿಜೆಪಿ ಹಾಲಿ ಶಾಸಕ ನಿರ್ಮಲ್‌ ರಾಣಿ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ಗನೌರ್‌ ಕ್ಷೇತ್ರದಲ್ಲಿ ದೇವೇಂದರ್‌ ಕೌಶಿಕ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ