ಪಾಟ್ನಾ: ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟದಿಂದ ಹೊರಬಂದು ಮತ್ತೆ ಎನ್ ಡಿಎ ಜೊತೆ ಕೈ ಜೋಡಿಸಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚಿಸಿದ್ದಾರೆ. ನಿತೀಶ್ ಕುಮಾರ್ ಗೆ ಪಕ್ಷಾಂತರ ಮಾಡುವುದು ಹೊಸದೇನಲ್ಲ. ಆದರೆ ಈ ಬಾರಿ ವಿಪಕ್ಷಗಳ ಮೈತ್ರಿ ಕೂಟ ಇಂಡಿಯಾಗೆ ಕೈ ಕೊಡಲು ಕಾರಣವೇನೆಂದು ರಾಜಕೀಯ ವಿಶ್ಲೇಷಕರು ಕಂಡುಕೊಂಡಿದ್ದಾರೆ.
ಮೋದಿಗೆ ಸೆಡ್ಡು ಹೊಡೆದು ಪ್ರಧಾನಿ ಅಭ್ಯರ್ಥಿಯಾಗಿ ತಮ್ಮನ್ನು ಬಿಂಬಿಸಿಕೊಳ್ಳುವ ಧಾವಂತದಲ್ಲಿ ನಿತೀಶ್ ಇದ್ದರು. ಇದೇ ಕಾರಣಕ್ಕೆ ಇಂಡಿಯಾ ಒಕ್ಕೂಟದ ಜೊತೆ ಸೇರಿಕೊಂಡರು. ಆದರೆ ಇತ್ತೀಚೆಗೆ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಸಂಭಾವ್ಯರ ಪಟ್ಟಿಯಲ್ಲಿ ನಿತೀಶ್ ಹೆಸರು ಎಲ್ಲಿಯೂ ಕೇಳಿಬರಲಿಲ್ಲ.
ಹೀಗಾಗಿಯೇ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಇದರ ಜೊತೆಗೆ ಬಿಹಾರದಲ್ಲಿ ಸೀಟು ಹಂಚಿಕೆ ವಿಚಾರ ಅವರ ಅಸಮಾಧಾನ ಹೆಚ್ಚಿಸಿತ್ತು. ಇಂಡಿಯಾ ಒಕ್ಕೂಟದಲ್ಲಿದ್ದರೆ ತಮ್ಮ ಪ್ರಧಾನಿ ಕನಸಂತೂ ನನಸಾಗಲ್ಲ ಎಂದು ಮನಗಂಡ ನಿತೀಶ್ ಹೊರಬಂದು ಮತ್ತೆ ಹಳೆಯ ದೋಸ್ತಿ ಎನ್ ಡಿಎ ಕೈ ಹಿಡಿದರು ಎಂದು ವಿಶ್ಲೇಷಿಸಲಾಗಿದೆ.
ಯಾವಾಗ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಸೂಚಿಸಿದರೋ ಅಂದಿನಿಂದ ಮೈತ್ರಿಕೂಟದಲ್ಲಿ ಬಿರುಕುಂಟಾಗಿದೆ. ಇದನ್ನೇ ಬಳಸಿಕೊಂಡು ಬಿಜೆಪಿ ಜೆಡಿಯುವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಇಂಡಿಯಾ ಒಕ್ಕೂಟ ಮುರಿಯುವಲ್ಲಿ ಬಹುತೇಕ ಯಶಸ್ವಿಯಾಗಿದೆ.