ಬೆಂಗಳೂರು: ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದ ಪಾವಿತ್ರ್ಯತೆಯನ್ನು ಪುನರ್ ಸ್ಥಾಪಿಸಲಾಗಿದೆ. ಈಗ ಸಿಗುತ್ತಿರುವ ಪ್ರಸಾದದ ಬಗ್ಗೆ ಆತಂಕಪಡಬೇಕಿಲ್ಲ, ಅದು ಕಳಂಕರಹಿತವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಸಮಿತಿ ಹೇಳಿದೆ.
ಈ ಕುರಿತು ಟಿಟಿಡಿ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದೆ. ಲಡ್ಡುವಿನ ದೈವತ್ವ ಹಾಗೂ ಪಾವಿತ್ರ್ಯತೆ ಇದೀಗ ಕಳಂಕರಹಿತವಾಗಿದೆ. ಭಕ್ತರಿಗೆ ಸಾಕಾಗುವಷ್ಟು ಹಾಗೂ ಪಾವಿತ್ರ್ಯತೆ ಇರುವ ಪ್ರಸಾದವನ್ನು ಒದಗಿಸುವಲ್ಲಿ ಟಿಟಿಡಿ ಬದ್ಧವಾಗಿದೆ ಎಂದು ಹೇಳಿದೆ.
ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಈ ಬಗ್ಗೆ ವ್ಯಾಪಕ ವಿವಾದವಾಗಿದೆ. ದೇವಸ್ಥಾನದ ಪಾವಿತ್ರ್ಯ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ವಿವಿಧೆಡೆ ಕೇಳಿಬಂದಿದೆ.
ಚಂದ್ರಬಾಬು ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ದೇವರನ್ನೂ ಬಳಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಆ ಮೂಲಕ ಅವರು ಕೋಟ್ಯಂತರ ಭಕ್ತರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಸಿಎಂ ವೈ.ಎಸ್.ಜಗನ್‌ಮೋಹನ್ ರೆಡ್ಡಿ ತಿರುಗೇಟು ನೀಡಿ, ಹೈಕೋರ್ಟ್ ಮೆಟ್ಟಲೇರಿದ್ದಾರೆ.