ನವದೆಹಲಿ: ವಯನಾಡಿನಲ್ಲಿ ರಾಹುಲ್ ಗಾಂಧಿಯಿಂದ ತೆರವಾಗುತ್ತಿರುವ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಪ್ರಿಯಾಂಕ ವಾದ್ರಾ ಸ್ಪರ್ಧಿಸಲು ತೀರ್ಮಾನಿಸಿದ ಬೆನ್ನಲ್ಲೇ ಅವರ ಪತಿ ರಾಬರ್ಟ್ ವಾದ್ರಾ ಪ್ರತಿಕ್ರಿಯಿಸಿದ್ದಾರೆ.
ಪ್ರಿಯಾಂಕ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅದೂ ತಮ್ಮನಿಂದ ತೆರವಾಗುತ್ತಿರುವ ಸ್ಥಾನಕ್ಕೆ ಅಕ್ಕನ ಸ್ಪರ್ಧೆ ನಡೆಯಲಿದೆ. ಈ ನಡುವೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪತಿ ರಾಬರ್ಟ್ ವಾದ್ರಾ ನಾನೂ ಮುಂದೊಂದು ದಿನ ಪತ್ನಿಯ ಹಿಂದೆಯೇ ಪಾರ್ಲಿಮೆಂಟ್ ಪ್ರವೇಶಿಸಬಹುದು ಎಂದಿದ್ದಾರೆ.
ಮೊದಲನೆಯದಾಗಿ ಬಿಜೆಪಿಯ ಜಾತಿ ಆಧಾರಿತ ಚುನಾವಣಾ ತಂತ್ರಕ್ಕೆ ಪಾಠ ಕಲಿಸಿದ ಭಾರತೀಯ ಜನರಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಪ್ರಿಯಾಂಕ ಸಂಸತ್ ಚುನಾವಣೆಗೆ ಸ್ಪರ್ಧಿಸುವುದು ನನಗೆ ಖುಷಿಯಾಗಿದೆ. ಆಕೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾಳೆ ಎಂಬ ಕಾರಣಕ್ಕೆ ಅಲ್ಲ, ಆಕೆ ಸಂಸತ್ತಿನಲ್ಲಿರಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಅಲ್ಲದೆ ತಾವೂ ಮುಂದೊಂದು ದಿನ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನಗಿಂತ ಮೊದಲು ಪ್ರಿಯಾಂಕ ಸಂಸತ್ ಗೆ ಪ್ರವೇಶಿಸಬೇಕು. ನಾನು ಮುಂದೊಂದು ದಿನ ಆಕೆಯನ್ನು ಹಿಂಬಾಲಿಸುತ್ತೇನೆ. ಜನ ಆಕೆಗೆ ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ.