ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿ ಗೆದ್ದಿದ್ದ ವಯನಾಡು ಲೋಕಸಭೆ ಕ್ಷೇತ್ರವನ್ನು ಈಗ ತಮ್ಮ ಸಹೋದರಿ ಪ್ರಿಯಾಂಕ ವಾದ್ರಾಗೆ ಬಿಟ್ಟುಕೊಡಲು ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಈ ಬಾರಿ ವಯನಾಡು ಮತ್ತು ರಾಯ್ ಬರೇಲಿಯಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಜಯಭೇರಿ ಭಾರಿಸಿದ್ದರು. ಇದೀಗ ಅನಿವಾರ್ಯವಾಗಿ ಒಂದು ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದಾರೆ. ಈ ಪೈಕಿ ಈಗ ರಾಯ್ ಬರೇಲಿಯನ್ನು ಉಳಿಸಿಕೊಂಡು ವಯನಾಡು ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ.
ಅದರಂತೆ ಈ ಕ್ಷೇತ್ರದಿಂದ ಪ್ರಿಯಾಂಕ ಸ್ಪರ್ಧಿಸಲಿದ್ದಾರೆ ಎಂದು ಕಳೆದ ಎರಡು ದಿನಗಳಿಂದ ಭಾರೀ ಸುದ್ದಿ ಓಡಾಡುತ್ತಿತ್ತು. ಸ್ವತಃ ರಾಹುಲ್ ಗಾಂಧಿಯೇ ಸಹೋದರಿಗೆ ಇಲ್ಲಿಂದ ಸ್ಪರ್ಧಿಸಲು ಮನವಿ ಮಾಡಿದ್ದಾರೆ ಎನ್ನಲಾಗಿತ್ತು. ಅದೀಗ ನಿಜವಾಗಿದೆ. ಈ ನಿಟ್ಟಿನಲ್ಲಿ ರಾಹುಲ್ ವಯನಾಡಿನ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದು, ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.
ಇದುವರೆಗೆ ಪ್ರಿಯಾಂಕ ವಾದ್ರಾ ಪಕ್ಷದ ಸಂಘಟನೆಗಳಲ್ಲಿ, ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರೇ ಹೊರತು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಚುನಾವಣಾ ಕಣಕ್ಕಿಳಿದಿದ್ದು ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.