ಅಹಮ್ಮದಾಬಾದ್: ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂಗೆ ಚೀನಾ ಫಸ್ಟ್, ಭಾರತ ನೆಕ್ಸ್ಟ್ ಎಂಬ ಧೋರಣೆಯಿತ್ತು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದಾರೆ.
ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ ಭಾರತದ ಪ್ರಥಮ ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಚೀನಾದ ಜೊತೆಗೆ ಭಾರತದ ಧೋರಣೆ ಕುರಿತಾಗಿ ಅವರು ಟೀಕಿಸಿದ್ದಾರೆ.
1950 ರಲ್ಲೇ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಚೀನಾದ ಬಗ್ಗೆ ನೆಹರೂಗೆ ಎಚ್ಚರಿಕೆ ನೀಡಿದ್ದರು. ಪಟೇಲ್ ಅಂದೇ ಚೀನಾ ಮತ್ತು ಪಾಕಿಸ್ತಾನ ನಮಗೆ ಮುಳ್ಳಾಗಬಹುದು. ಚೀನಾದ ಉದ್ದೇಶ ಸರಿ ಇಲ್ಲ. ಆ ದೇಶ ನಂಬಿಕೆಗೆ ಅರ್ಹವಲ್ಲ. ನಾವು ಎಚ್ಚರಿಕೆಯಲ್ಲಿರಬೇಕು ಎಂದಿದ್ದರು. ಆದರೆ ಪಟೇಲ್ ಮಾತುಗಳನ್ನು ನೆಹರೂ ಕಿವಿ ಮೇಲೇ ಹಾಕಿಕೊಳ್ಳಲಿಲ್ಲ. ಬದಲಾಗಿ ನೀವು ಅನಗತ್ಯವಾಗಿ ಚೀನಾವನ್ನು ಸಂಶಯಿಸುತ್ತಿದ್ದೀರಿ ಎಂದು ದೂರಿದರು. ಹಿಮಾಲಯ ದಾಟಿ ಚೀನಾಗೆ ನಮ್ಮ ಮೇಲೆ ಆಕ್ರಮಣ ಮಾಡಲು ಸಾಧ್ಯವಿಲ್ಲ ಎಂದರು. ಬಳಿಕ ವಿಶ್ವಸಂಸ್ಥೆ ಸದಸ್ಯತ್ವ ಸಿಗುತ್ತದೆ ಎಂದಾಗಲೂ ಮೊದಲು ಚೀನಾಗೆ ಸಿಗಲಿ ಎಂದರು. ಚೀನಾ ಮೊದಲು ನಾವು ನಂತರ ಎಂದು ಭಾರತದ ಅಂದಿನ ಪ್ರಧಾನಿ ಹೇಳಿದ್ದು ಇದೆ ಎಂದು ಜೈಶಂಕರ್ ವಾಗ್ದಾಳಿ ನಡೆಸಿದ್ದಾರೆ.
ಈಗ ಕೆಲವರು ಗಡಿ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮ ಗಡಿ ಯಾರಿಗೂ ಬಿಟ್ಟುಕೊಟ್ಟಿಲ್ಲ ಎಂದು ಚೀನಾಕ್ಕೆ ಮೋದಿ ಸರ್ಕಾರ ಭಾರತದ ಗಡಿ ಆಕ್ರಮಿಸಿಕೊಳ್ಳಲು ಬಿಟ್ಟಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.