ಶಬರಿಮಲೆ ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದ ತೃಪ್ತಿ ದೇಸಾಯಿಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತಡೆ
ಶುಕ್ರವಾರ, 16 ನವೆಂಬರ್ 2018 (09:14 IST)
ಕೊಚ್ಚಿ: ಶಬರಿಮಲೆ ದೇವಾಲಯ ಇಂದಿನಿಂದ ತೆರೆದುಕೊಳ್ಳುತ್ತಿದ್ದು, ಮತ್ತೊಂದು ಸುತ್ತಿನ ಹೋರಾಟ, ಪ್ರತಿಭಟನೆಗೆ ಸಜ್ಜಾಗಿದೆ.
ಸುಪ್ರೀಂಕೋರ್ಟ್ 10 ರಿಂದ 50 ವರ್ಷದೊಳಗಿನ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ತೀರ್ಪು ನೀಡಿದ ಬಳಿಕ ಇದು ಎರಡನೇ ಬಾರಿ ದೇವಾಲಯ ತೆರೆದುಕೊಳ್ಳುತ್ತಿದೆ. ಕಳೆದ ಬಾರಿ ಮಹಿಳೆಯರ ಪ್ರವೇಶಕ್ಕೆ ತಡೆ ನೀಡುವುದರಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದರು.
ಆದರೆ ಈ ಬಾರಿ ತಾವು ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದು ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ನೂರಾರು ಮಂದಿ ಪ್ರತಿಭಟನಾಕಾರರು ಅಲ್ಲಿಂದ ಹೊರ ಬಾರದಂತೆ ತೃಪ್ತಿ ದೇಸಾಯಿಗೆ ನಿರ್ಬಂಧ ವಿಧಿಸಿದ್ದಾರೆ. ಹಾಗಿದ್ದರೂ ನವಂಬರ್ 17 ರಂದು ಪೊಲೀಸರ ಭದ್ರತೆಯಲ್ಲಿ ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದು ತೃಪ್ತಿ ಪಟ್ಟು ಹಿಡಿದಿದ್ದಾರೆ.
ಈ ನಡುವೆ ನಿನ್ನೆ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆ ವಿಫಲವಾಗಿದೆ. ಮಹಿಳೆಯರ ಪ್ರವೇಶ ಆದೇಶ ಪಾಲಿಸಲು ಕೆಲ ಕಾಲ ಅವಕಾಶ ಕೋರೋಣ ಎಂಬ ಮನವಿಗೆ ಸಿಎಂ ಪಿಣರಾಯಿ ಒಪ್ಪಿಕೊಂಡಿಲ್ಲ. ಹೀಗಾಗಿ ಸಭೆ ವಿಫಲಗೊಂಡಿದೆ. ಈ ನಡುವೆ ಪಂದಳ ರಾಜ ಮನೆತನ ಕೂಡಾ ಮಹಿಳೆಯ ಪ್ರವೇಶವನ್ನು ವಿರೋಧಿಸುತ್ತಲೇ ಇದೆ. ಹೀಗಾಗಿ ತಿರುವಂಕೂರು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.