ಪುರಿ: ಜಗದೊಡೆಯ ಪುರಿ ಜಗನ್ನಾಥ ಸ್ವಾಮಿಯೇ ಪ್ರಧಾನಿ ಮೋದಿ ಭಕ್ತ ಎಂದು ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ನೀಡಿರುವ ವಿವಾದಾತ್ಮಕ ಹೇಳಿಕೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ವಿವಾದದ ಬಳಿಕ ಸಂಬಿತ್ ಪಾತ್ರಾ ಕ್ಷಮೆ ಕೇಳಿದ್ದಾರೆ.
ಪ್ರಧಾನಿ ಮೋದಿಯನ್ನು ಹೊಗಳುವ ಭರದಲ್ಲಿ ಪುರಿ ಜಗನ್ನಾಥನ ಬಗ್ಗೆ ಇಂತಹದ್ದೊಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಡಿಶ್ಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಒಬ್ಬ ಮನುಷ್ಯನನ್ನು ದೇವರಿಗೆ ಭಕ್ತ ಎಂದು ಹೇಳುವ ಮೂಲಕ ಸಂಬಿತ್ ಪಾತ್ರಾ ದೇವರಿಗೇ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ಸೋಮವಾರ ಪುರಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ಬಳಿಕ ಮಾಧ್ಯಮಗಳ ಮುಂದೆ ಮಾತನಾಡುವಾಗ ಸಂಬಿತ್ ಪಾತ್ರಾ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಭಗವಾನ್ ಜಗನ್ನಾಥನಿಗೆ ಮಾಡಿದ ಅವಮಾನವನ್ನು ಜನರು ಕ್ಷಮಿಸಲ್ಲ ಎಂದಿದ್ದಾರೆ.
ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೇ ಸಂಬಿತ್ ಪಾತ್ರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಬಾಯ್ತಪ್ಪಿ ಇಂಥಹದ್ದೊಂದು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ. ಇದು ಬಾಯ್ತಪ್ಪಿನಿಂದ ನೀಡಿದ ಹೇಳಿಕೆಯಷ್ಟೇ, ಇದನ್ನು ದೊಡ್ಡ ವಿವಾದ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.