ಲೈಂಗಿಕ ಕಿರುಕುಳ ನೀಡಿದ ಆರೋಪವನ್ನೆದುರಿಸುತ್ತಿರುವ ಮೇಘಾಲಯ ರಾಜ್ಯಪಾಲ ವಿ. ಷಣ್ಮುಗನಾಥನ್ (67) ಗುರುವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂವಿಧಾನಾತ್ಮಕ ಹುದ್ದೆಯ ಗೌರವವನ್ನುಳಿಸಲು ಷಣ್ಮುಗನಾಥನ್ ಅವರನ್ನು ವಜಾ ಮಾಡಬೇಕೆಂದು ರಾಜಭವನದ ಒಂದು ಗುಂಪು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಅವರನ್ನು ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಸುವಂತೆ ವ್ಯಾಪಕ ಒತ್ತಾಯ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ರಾಜಭವನದ 80 ಸಿಬ್ಬಂದಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಮತ್ತು ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು.
ಷಣ್ಮುಗನಾಥನ್ ಅವರು ರಾಜಭವನದ ಘನತೆಗೆ ಚ್ಯುತಿ ತರುತ್ತಿದ್ದಾರೆ. ರಾಜಭವನವನ್ನು ಯುವತಿಯರ ಕ್ಲಬ್ ಆಗಿ ಪರಿವರ್ತನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ತಮ್ಮ ಮೇಲಿನ ಆರೋಪಗಳನ್ನು ನಾಥನ್ ತಳ್ಳಿ ಹಾಕಿದ್ದಾರೆ.
ಗುರುವಾರ ಮುಂಜಾನೆ ರಾಜಧಾನಿ ಶಿಲ್ಲಾಂಗ್‌ನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿ ಮುಕುಲ್ ಸಾಂಗ್ಮಾ ಧ್ವಜಾರೋಹಣವನ್ನು ನೆರವೇರಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ