ನವದೆಹಲಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸದೇ ಇರಲು ತೀರ್ಮಾನಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ರಾಜಸ್ಥಾನ್ ನಿಂದ ರಾಜ್ಯಸಭೆಗೆ ಸ್ಪರ್ಧಿಸಲು ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ದೆಹಲಿಯಿಂದ ಜೈಪುರಕ್ಕೆ ಬಂದಿಳಿದಿರುವ ಸೋನಿಯಾ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆರೋಗ್ಯದ ಕಾರಣದಿಂದ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ತೀರ್ಮಾನಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಪುತ್ರ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿರಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನಾಂಕವಾಗಿದೆ. ಫೆಬ್ರವರಿ 27 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಇಂದೇ ಸೋನಿಯಾ ನಾಮಪತ್ರ ಸಲ್ಲಿಸುತ್ತಿದ್ದಾರೆ.
ಸೋಮವಾರ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಸೇರಿದಂತೆ ಹಿರಿಯ ನಾಯಕರು ಸಭೆ ನಡೆಸಿ ಈ ಬಾರಿ ಸೋನಿಯಾ ಲೋಕಸಭೆ ಬದಲು ರಾಜ್ಯ ಸಭೆಗೆ ಸ್ಪರ್ಧಿಸುವ ಕುರಿತು ತೀರ್ಮಾನಕ್ಕೆ ಬಂದಿದ್ದರು. ಮೊದಲು ಹಿಮಾಚಲ ಪ್ರದೇಶದಿಂದ ಸ್ಪರ್ಧಿಸುವುದೆಂದು ಯೋಜನೆ ರೂಪಿಸಲಾಗಿತ್ತು. ಬಳಿಕ ರಾಜಸ್ಥಾನ್ ಗೆ ಶಿಫ್ಟ್ ಆಗಲು ತೀರ್ಮಾನಿಸಲಾಯಿತು.
ಸೋನಿಯಾ ಗಾಂಧಿ ಐದು ಬಾರಿ ಲೋಕಸಭಾ ಸಂಸದೆಯಾಗಿ ಆಯ್ಕೆಯಾಗಿದ್ದವರು. ಇದುವರೆಗೆ ಅಮೇಠಿ, ರಾಯ್ ಬರೇಲಿ ಮತ್ತು ಕರ್ನಾಟಕದ ಬಳ್ಳಾರಿಯಿಂದಲೂ ಸೋನಿಯಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ಇದೀಗ ಅವರು ಸ್ಪರ್ಧಿಸುತ್ತಿದ್ದ ರಾಯ್ ಬರೇಲಿ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುವ ನಿರೀಕ್ಷೆಯಿದೆ.