ನವದೆಹಲಿ: ಇಲ್ಲಿನ ಇಂದ್ರಪ್ರಸ್ಥದ ಅಪೊಲೋ ಖಾಸಗಿ ಆಸ್ಪತ್ರೆಯಲ್ಲಿ ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರು ತುರ್ತು ಮೆದುಳು ಶಶ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಮಾರ್ಚ್ 17ರಂದು ರಕ್ತಸ್ರಾವ ತಡೆಯಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸರ್ಜರಿ ಬಳಿಕ ಚೇತರಿಸಿಕೊಂಡಿರುವ ಸದ್ಗುರು ವೆಂಟಿಲೇಟರ್‌ನಿಂದ ಹೊರಬಂದಿದ್ದಾರೆ. ಅವರ ಮೆದುಳು, ದೇಹದ ಪ್ರಮುಖ ಅಂಗಾಂಗಗಳು ಚೇತರಿಸಿಕೊಳ್ಳುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.
ನಾಲ್ಕು ವಾರಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಅವರು ಮಾರ್ಚ್ 8ರಂದು ಮಹಾಶಿವರಾತ್ರಿಯನ್ನು ಅದ್ದೂರಿಯಾಗಿ ನಡೆಸಿಕೊಟ್ಟಿದ್ದರು. ತಲೆನೋವಿನ ಬಗ್ಗೆ ಹಿರಿಯ ನರರೋಗ ತಜ್ಞ ಡಾ.ವಿನಿತ್ ಸೂರಿ ಅವರಿಗೆ ಕರೆ ಮಾಡಿ ಸದ್ಗುರು ತಿಳಿಸಿದ್ದಾರೆ. ಅವರ ಸಲಹೆಯಂತೆ ಎಂಆರ್‌ಐ ಮಾಡಿಸಿಕೊಂಡಿದ್ದು, ಈ ವೇಳೆ ರಕ್ತಸ್ರಾವ ಆಗಿರುವುದು ಕಂಡುಬಂದಿದೆ.
ಸದ್ಗುರು ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿತ್ತು. ಆದರೆ, ಮಾರ್ಚ್ 15 ಮತ್ತು 16ರಂದು ಪ್ರಮುಖ ಸಭೆಗಳು ಇದ್ದ ಕಾರಣ, ನೋವು ನಿವಾರಕ ಮಾತ್ರೆ ಪಡೆದು ಎರಡು ದಿನಗಳ ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆ ತಿಳಿಸಿದೆ.