ಕೊರೋನಾ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿಗಳೊಂದಿಗೆ ವ್ಯವಹರಿಸಲು,
ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಆದೇಶಿಸಿದೆ.
ಜ. ಎಂ.ಆರ್.ಶಾ ಮತ್ತು ಬಿ.ವಿ ನಾಗರತ್ನ ಅವರ ಪೀಠ, ಇಂದಿನಿಂದ ಒಂದು ವಾರದ ಒಳಗಾಗಿ ರಾಜ್ಯ ಸರ್ಕಾರಗಳು ಸೋಂಕಿನಿಂದ ಮೃತಪಟ್ಟವರ ಹೆಸರು, ವಿಳಾಸ ಮತ್ತು ಮರಣಪ್ರಮಾಣಪತ್ರ ಮತ್ತು ಅನಾಥರ ವಿವರವನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಒಂದು ವೇಳೆ ಮಾಹಿತಿ ಸಲ್ಲಿಸಲು ವಿಫಲವಾದರೆ ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಎಚ್ಚರಿಸಿದೆ.
ಹಾಗೆಯೇ ತಾಂತ್ರಿಕ ಕಾರಣಗಳಿಂದ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ದೋಷಗಳನ್ನು ಪರಿಹರಿಸಲು ಅವಕಾಶ ನೀಡಬೇಕು. ಅರ್ಜಿ ಸಲ್ಲಿಕೆ ನಂತರ 10 ದಿನದ ಒಳಗಾಗಿ ಪರಿಹಾರ ಹಣವನ್ನು ಪಾವತಿ ಮಾಡುವ ಎಲ್ಲಾ ಪ್ರಯತ್ನ ಮಾಡಬೇಕು ಎಂದು ಸೂಚಿಸಿದೆ.