ಔಷಧಿ ಇಲ್ಲದೆ ಶಸ್ತ್ರಚಿಕಿತ್ಸೆ ಸ್ಥಗಿತ !

ಬುಧವಾರ, 30 ಮಾರ್ಚ್ 2022 (08:56 IST)
ಕೊಲಂಬೊ : ಆರ್ಥಿಕ ಮುಗ್ಗಟ್ಟು, ವಿದೇಶಿ ವಿನಿಮಯ ಕೊರತೆ ಕಾರಣ ವಿದೇಶಗಳಿಂದ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಶ್ರೀಲಂಕಾದಲ್ಲಿ ಇದೀಗ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿವೆ.

ಲಂಕಾದ ಪ್ರಮುಖ ನಗರಗಳ ಪೈಕಿ ಒಂದಾದ ಕ್ಯಾಂಡಿ ನಗರದ ಪೆರಿಡೆನಿಯಾ ಆಸ್ಪತ್ರೆಯಲ್ಲಿ ಸೋಮವಾರದಿಂದಲೇ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನೂ ಸ್ಥಗಿತಗೊಳಿಸಿ ಪ್ರಕಟಣೆ ಹೊರಡಿಸಲಾಗಿದೆ.

ಈ ಕುರಿತು ಸೋಮವಾರ ಸುತ್ತೋಲೆ ಹೊರಡಿಸಿರುವ ಆಸ್ಪತ್ರೆಯ ನಿರ್ದೇಶಕರು ‘ಅರಿವಳಿಕೆ ನೀಡಲು ಬಳಸುವ ಕೆಲ ಔಷಧ, ಶಸ್ತ್ರಚಿಕಿತ್ಸೆಗೆ ಬೇಕಾದ ಉಪಕರಣ ಮತ್ತು ಕೆಲ ಔಷಧಗಳು ಅಲಭ್ಯವಾಗಿರುವ ಕಾರಣ, ನಾವು ಸೋಮವಾರ ದಾಖಲಾಗಿರುವ ರೋಗಿಗಳೂ ಸೇರಿದಂತೆ ಯಾರಿಗೂ ಶಸ್ತ್ರಚಿಕಿತ್ಸೆ ಕೈಗೊಳ್ಳದೇ ಇರುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ತನ್ನ ಬಹುತೇಕ ಅಗತ್ಯಕ್ಕೆ ವಿದೇಶಗಳನ್ನೇ ನಂಬಿರುವ ಶ್ರೀಲಂಕಾ ಇದೀಗ ಸಾಲದ ಸುಳಿಯಲ್ಲಿ ಮುಳುಗಿದೆ. ಆದಾಯದ ಮೂಲವಾದ ಪ್ರವಾಸೋದ್ಯಮ ಮಲಗಿದೆ. ಪರಿಣಾಮ ವಿದೇಶಿ ವಿನಿಮಯ ಪೂರ್ತಿ ಕರಗಿ ಹೋಗಿದೆ. ವಿದೇಶಗಳಿಂದ ವಸ್ತುಗಳ ಖರೀದಿಗೂ ಹಣವಿಲ್ಲದಾಗಿದೆ.

ಪರಿಣಾಮ ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಹೈರಾಣಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ