ಡೊಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಉತ್ತರಿಸಿದ ಸುಷ್ಮಾ ಸ್ವರಾಜ್, ಟಿಬೆಟ್, ಸಿಕ್ಕಿಂ, ಚೀನಾ ಗಡಿ ರೇಖೆಗಳಲ್ಲಿ ರಸ್ತೆ ನಿರ್ಮಾಣ, ರಿಪೇರಿ ಎಂಬ ಕಾರಣಗಳನ್ನು ನೀಡಿ ಚೀನಾ ಗಡಿ ದಾಟಿ ಮುಂದೆ ಬರುತ್ತಿದೆ. ಗಡಿಯಲ್ಲಿ ನಿಯೋಜಿಸಿರುವ ಸೈನಿಕರನ್ನು ಭಾರತ ಹಿಂಪಡೆಯಬೇಕು ಎಂದು ಚೀನಾ ಬಯಸಿದರೆ, ಅದೇ ಸ್ಥಳದಲ್ಲಿ ಚೀನಾ ನಿಯೋಜಿಸಿರುವ ಸೈನಿಕರನ್ನೂ ಹಿಂಪಡೆಯಲಿ ಎಂಬುದು ಭಾರತದ ಆಗ್ರಹ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಉಭಯ ರಾಷ್ಟ್ರಗಳ ಸೇನೆ ಹಿಂದಕ್ಕೆ ಸರಿದ ಬಳಿಕವಷ್ಟೇ ಗಡಿ ಬಿಕ್ಕಟ್ಟು ಕುರಿತ ಯಾವುದೇ ವಿಚಾರ ಕುರಿತಂತೆ ಮಾತುಕತೆ ನಡೆಸಲು ಭಾರತ ಸಿದ್ಧವಾಗಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿಯೂ ತನ್ನನ್ನು ಸಮರ್ಥಿಸಿಕೊಳ್ಳಲು ಭಾರತ ಸಿದ್ಧವಿದೆ. ವಿವಾದ ಸಂಬಂಧ ಕಾನೂನು ಮತ್ತು ಹಕ್ಕುಗಳು ನಮ್ಮ ಕಡಿಗಿದೆ. ಇತರೆ ದೇಶದ ಜನತೆ ಹಾಗೂ ಇತರೆ ರಾಷ್ಟ್ರಗಳು ಭಾರತದ ನಿಲುವನ್ನು ಬೆಂಬಲಿಸಿವೆ. ಚೀನಾದ ನಡೆಯನ್ನು ನಾವು ಒಗ್ಗಟ್ಟಿನಿಂದ ಖಂಡಿಸುವುದಾಗಿ ತಿಳಿಸಿದ್ದಾರೆ.