ಮಗಳಿಗಾಗಿ 30 ವರ್ಷ ಗಂಡಸಿನ ವೇಷದಲ್ಲಿ ಬದುಕಿದ ತಮಿಳುನಾಡು ಮಹಿಳೆ!

ಶನಿವಾರ, 14 ಮೇ 2022 (21:39 IST)
ತ್ಯಾಗಕ್ಕೆ ಮತ್ತೊಂದು ಹೆಸರೇ ಅಮ್ಮ. ಅಮ್ಮ ಮಕ್ಕಳಿಗಾಗಿ ಏನೆಲ್ಲಾ ತ್ಯಾಗ ಮಾಡುತ್ತಾಳೆ ಅಂದರೆ ಅದು ಆಕೆಗಷ್ಟೇ ಗೊತ್ತಿರುತ್ತೆ. ಅದನ್ನು ಊಹಿಸಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಅಂತಹ ಊಹೆಗೂ ನಿಲುಕದಂತೆ ಮಹಿಳೆಯೊಬ್ಬರು 30 ವರ್ಷ ಗಂಡಸಿನ ವೇಷದಲ್ಲಿ ಬದುಕಿದ ಘಟನೆಯೊಂದು ಬೆಳಕಿಗೆ ಬಂದಿದೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ತೂತುಕುಡಿ ಎಂಬ ಗ್ರಾಮದ ಪೀಚಿಯಮ್ಮಾಳ್ ಎಂಬ ಮಹಿಳೆ 30 ವರ್ಷಗಳ ಕಾಲ ಗಂಡಸರಂತೆ ವೇಷ ಧರಿಸಿ ಜೀವನ ನಡೆಸಿ ಸೈ ಎನಿಸಿಕೊಂಡಿದ್ದಾರೆ.
ಕೇವಲ ತನ್ನ ಮಗಳಿಗಾಗಿ ಪೀಚಿಯಮ್ಮಾಳ್ ಗಂಡಸರಂತೆ ಬದುಕಿದ್ದೂ ಅಲ್ಲದೇ ಮುತ್ತು ಎಂಬ ಹೆಸರಿನಲ್ಲಿ ಯಾರಿಗೂ ಗೊತ್ತಾಗದಂತೆ ಗಂಡಸಿನ ವೇಷ ಧರಿಸಿದ್ದೂ ಮಾತ್ರವಲ್ಲ, ಗಂಡಸರಂತೆ ಹೊರಗಿನ ಸಮಾಜದಲ್ಲಿ ಜೀವನ ಸಾಗಿಸಿದ್ದಾರೆ.
ಪೀಚಿಯಮ್ಮಾಳ್ 20 ವರ್ಷದವರಿದ್ದಾಗಲೇ ಮದುವೆ ಆಗಿತ್ತು. ಮದುವೆ ಆಗಿ 15 ದಿನಕ್ಕೇ ಗಂಡ ಹೃದಯಾಘಾತದಿಂದ ಮೃತಪಟ್ಟರು. ಇದೇ ವೇಳೆ ಗರ್ಭಿಣಿಯಾಗಿದ್ದ ಪೀಚಿಯಮ್ಮಾಳ್ ಹೆಣ್ಣು ಮಗುವಿಗೆ ಜನ್ಮ ನೀಡಿದಳು.
ಮಗು ಜನಿಸಿದ ನಂತರ ಆಕೆಯ ಬದುಕು ಕಟ್ಟಲು ಹಾಗೂ ಜೀವನ ರೂಪಿಸಿಕೊಳ್ಳಲು ಪೀಚಿಯಮ್ಮಾಳ್ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ಆದರೆ ಯೌವ್ವನದಲ್ಲಿದ್ದ ಆಕೆಯ ಬಗ್ಗೆ ಜನರು ದಿನಕ್ಕೊಂದು ಮಾತುಗಳನ್ನು ಆಡತೊಡಗಿದರು. ಅಲ್ಲದೇ ಕೆಲಸದ ಜಾಗದಲ್ಲಿ ಕಿರುಕುಳ ನೀಡಲು ಆರಂಭಿಸಿದರು. 
ಇದರಿಂದ ಬೇಸತ್ತ ಪೀಚಿಯಮ್ಮಾಳ್ ಮಗಳಿಗಾಗಿ ಗಂಡಸರ ವೇಷ ಧರಿಸಲು ನಿರ್ಧರಿಸಿ ತಲೆ ಕೂದಲು ಕತ್ತರಿಸಿಕೊಂಡು ಲುಂಗಿ ಧರಿಸಿ, ಶರ್ಟ್ ಧರಿಸಿ ಗಂಡಸರಂತೆ ಓಡಾಡಲು ಶುರು ಮಾಡಿದರು. ಯಾರೂ ಹೆಣ್ಣು ಎಂದು ಗುರುತಿಸಲಾಗದಷ್ಟು ಬದಲಾದ ಪೀಚಿಯಮ್ಮಾಳ್, ಚೆನ್ನೈ ಸೇರಿದಂತೆ ಹಲವೆಡೆ ಹೋಟೆಲ್, ಚಹಾ ಅಂಗಡಿ ಮುಂತಾದೆಡೆ ಕೆಲಸ ಮಾಡಿ ಜೀವನ ಸಾಗಿಸಿದರು.
ಮುತ್ತು ಬರು ಬರುತ್ತಾ ಮುತ್ತು ಮಾಸ್ಟರ್ ಎಂದೇ ಖ್ಯಾತಿ ಗಳಿಸಿದ್ದು, ಪರೋಟಾ ಮತ್ತು ಟೀ ಮಾಡುವುದರಲ್ಲಿ ಫೇಮಸ್ ಆದರು. 
ತನ್ನ ಜೀವನದ ಬಗ್ಗೆ ಮಾತನಾಡಿದ ಪೀಚಿಯಮ್ಮಾಳ್, ನಾನು ಪೇಂಟರ್,  ಹೋಟೆಲ್ ಸೇರಿದಂತೆ ಎಲ್ಲಾ ರೀತಿಯ ಕೆಲಸ ಮಾಡಿದ್ದೇನೆ. ನನ್ನನ್ನು ಮುತ್ತು ಮಾಸ್ಟರ್ ಎಂದೇ ಎಲ್ಲರೂ ಗುರುತಿಸುತ್ತಾರೆ. ಮಗಳ ಜೀವನದ ಭದ್ರತೆಗಾಗಿ ಪ್ರತಿಯೊಂದು ಪೈಸೆ ಕೂಡಿಟಿದ್ದೇನೆ. ಅಷ್ಟೇ ಏಕೆ ನನ್ನ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲದರಲ್ಲೂ ಮುತ್ತು ಎಂದೇ ಗುರುತಿಸುತ್ತಾರೆ ಎಂದು ಹೇಳಿದ್ದಾರೆ.
ಈಗ ಪೀಚಿಯಮ್ಮಾಳ್ ಗೆ ೫೭ ವರ್ಷ. ಮಗಳಿಗೆ ಮದುವೆ ಆಗಿ ಗಂಡನ ಮನೆ ಸೇರಿದ್ದಾಳೆ. ಇಷ್ಟು ದಿನ ನಾನು ನಡೆಸಿದ ಜೀವನ ಸಾರ್ಥಕ ಎನಿಸಿದೆ. ನನ್ನ ಜೀವನದ ಕೊನೆಯವರೆಗೂ ಮುತ್ತು ಆಗಿಯೇ ಬದಕುಲು ಬಯಸುತ್ತೇನೆ. ಸರಕಾರದಿಂದ ಪಿಂಚಣಿ ಸಿಕ್ಕರೆ ನಾನು ಇದೇ ಜೀವನ ಮುಂದುವರಿಸುತ್ತೇನೆ. ಏಕೆಂದರೆ ಸರಕಾರದ ಹಲವಾರು ಸವಲತ್ತುಗಳಿಂದ ನಾನು ವಂಚಿತಳಾಗಿದ್ದೇನೆ ಎಂದು ಪೀಚಿಯಮ್ಮಾಳ್ ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ