ಟಿಟಿವಿ ದಿನಕರನ್ ಬಣದ 18 ಶಾಸಕರನ್ನ ಅನರ್ಹಗೊಳಿಸಿ ಸ್ಪೀಕರ್ ಆದೇಶ

ಸೋಮವಾರ, 18 ಸೆಪ್ಟಂಬರ್ 2017 (11:59 IST)
ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ. ಶಶಿಕಲಾ ಆಪ್ತ ಟಿಟಿವಿ ದಿನಕರನ್ ಜೊತೆ ಗುರುತಿಸಿಕೊಂಡಿದ್ದ 18 ಶಾಸಕರನ್ನ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿ ಸ್ಪೀಕರ್ ಧನಪಾಲ್ ಆದೇಶಿಸಿದ್ಧಾರೆ.

ಪಕ್ಷದಿಂದ ಉಚ್ಚಾಟನೆಯಾಗಿರುವ ಟಿಟಿವಿ ದಿನಕರನ್`ಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿದೆ. ನಿನ್ನೆ ತಾನೇ ಸಿಎಂ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ದಿನಕರನ್, ನೀನು ಈಗ ಪಡೆದಿರುವ ಪದವಿ ಚಿನ್ನಮ್ಮ ನಿನಗೆ ಕೊಟ್ಟಿದ್ದು, ಕೂಡಲೇ ರಾಜೀನಾಮೆ ಕೊಡು. ಕೂಡಲೇ ಶಾಸಕಾಂಗ ಸಭೆ ಕರೆದು ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದರು. ಜೊತೆಗೆ ಸರ್ಕಾರ ಉರುಳಿಸುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ಪೀಕರ್`ರಿಂದ ಇಂಥದ್ದೊಂದು ಆದೇಶ ಹೊರಬಿದ್ದಿದೆ.

ಕಳೆದ ತಿಂಗಳಷ್ಟೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಿ.ಕೆ. ಶಶಿಕಲಾ ಮತ್ತು ಮಧ್ಯಂತರ ಉಪ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಟಿಟಿವಿ ದಿನಕರನ್ ಅವರನ್ನ ವಜಾ ಮಾಡಿ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಶಶಿಕಲಾ ಜೈಲು ಸೇರಿದ ಬಳಿಕ ಟಿಟಿವಿ ದಿನಕರನ್ ಉಪಟಳ ಅಡಗಿಸಲು ಒಂದಾಗಿದ್ದ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ವೀಲಿನದ ಒಪ್ಪಂದದಂತೆ ಈ ನಿರ್ಧಾರ ಕೈಗೊಂಡಿದ್ದರು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ದಿನಕರನ್ ಕೂಡಲೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಕೋರಿದ್ದರು. ಕೋರ್ಟ್ ಸಹ ಸದ್ಯಕ್ಕೆ ವಿಶ್ವಾಸಮತಯಾಚನೆ ಅಗತ್ಯವಿಲ್ಲ ಎಂದು ಹೇಳಿತ್ತು.
ಈ ಎಲ್ಲ ಘಟನೆಗಳ ಮಧ್ಯೆ ಇವತ್ತು ಕೊಡಗಿನಲ್ಲಿ ನೆಲೆಸಿರುವ ಅಣ್ಣಾಡಿಎಂಕೆ ಅನರ್ಹ ಶಾಸಕರನ್ನ ಟಿಟಿವಿ ದಿನಕರನ್ ಭೇಟಿ ಮಾಡುವ ಸಾಧ್ಯತೆ ಇದ್ದು, ಮುಂದಿನ ಹೋರಾಟದ ಯೋಜನೆ ರೂಪಿಸಲಿದ್ದಾರೆಮದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ