ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾದ ಕೆಸಿಆರ್
ಶುಕ್ರವಾರ, 8 ಡಿಸೆಂಬರ್ 2023 (10:43 IST)
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಮಾಜಿ ಸಿಎ ಕೆ ಚಂದ್ರಶೇಖರ ರಾವ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚುನಾವಣೆ ಗೌಜಿ ಗದ್ದಲದ ಬಳಿಕ ಕೆಸಿಆರ್ ಈರಾವಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶ್ರಾಂತಿಯಲ್ಲಿದ್ದರು. ನಿನ್ನೆ ರಾತ್ರಿ ಜಾರಿ ಬಿದ್ದಿದ್ದ ಅವರಿಗೆ ಸೊಂಟಕ್ಕೆ ಪೆಟ್ಟಾಗಿದೆ. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಧ‍್ಯಮಗಳಿಗೆ ಮಾಹಿತಿ ನೀಡಿರುವ ಕೆಸಿಆರ್ ಪುತ್ರಿ, ಎಂಎಲ್ ಸಿ ಕವಿತಾ, ತಂದೆ ಅನಿರೀಕ್ಷಿತವಾಗಿ ಬಿದ್ದಿದ್ದರಿಂದ ಸೊಂಟದ ಭಾಗದ ಎಲುಬಿಗೆ ಪೆಟ್ಟಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
69 ವರ್ಷದ ಕೆಸಿಆರ್ ಗೆ ಶಸ್ತ್ರಚಿಕಿತ್ಸೆ ಅಗತ್ಯಬಿದ್ದರೆ ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಉಳಿದಂತೆ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.