ಲಸಿಕೆ ನೀಡಿಕೆಯಲ್ಲಿ ದೇಶದ ಸಾಧನೆ

ಶುಕ್ರವಾರ, 22 ಅಕ್ಟೋಬರ್ 2021 (07:16 IST)
ನವದೆಹಲಿ : ವಿಶ್ವವನ್ನು ಕಾಡಿದ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಭಾರತವು ಕೊರೊನಾ ಪ್ರತಿಬಂಧಕ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಚರಿತ್ರಾರ್ಹ ಸಾಧನೆಯನ್ನು ಮಾಡಿದೆ.

ಸದ್ಯ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು ಲಸಿಕೆ ಪ್ರಕ್ರಿಯೆ ಆರಂಭವಾದ 9 ತಿಂಗಳುಗಳ ಅವಧಿಯಲ್ಲಿ 100 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ದಾಖಲೆ ನಿರ್ಮಿಸಿದೆ.
2020ರ ಮಾರ್ಚ್ನಲ್ಲಿ ದೇಶಕ್ಕೆ ಕಾಲಿರಿಸಿದ ಕೊರೊನಾ ಸಾಂಕ್ರಾಮಿಕದ ಪ್ರಥಮ ಅಲೆ ದೇಶದಲ್ಲಿ ಭಾರೀ ಆತಂಕವನ್ನು ಸೃಷ್ಟಿಸಿತ್ತು. ಹತ್ತು ಹಲವು ಕೊರತೆ, ಸಂಕಷ್ಟಗಳ ಹೊರತಾಗಿಯೂ ಸರಕಾರದ ಕಠಿನ ಕ್ರಮದಿಂದಾಗಿ ನಿಯಂತ್ರಣಕ್ಕೆ ಬಂದಿತು. ಪ್ರಸಕ್ತ ವರ್ಷದ ಜ. 16ರಂದು ಲಸಿಕೆ ನೀಡಿಕೆ ಆರಂಭ ಗೊಂಡಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, 2ನೇ ಹಂತದಲ್ಲಿ ಫೆ. 2ರಿಂದ ಮುಂಚೂಣಿ ಕಾರ್ಯಕರ್ತರು, ಮೂರನೇ ಹಂತದಲ್ಲಿ ಮಾರ್ಚ್ ತಿಂಗಳ ಆರಂಭದಿಂದ 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಕಾಯಿಲೆ ಪೀಡಿತ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಯಿತು.
ಈ ವೇಳೆ ಕೊರೊನಾ ಒಂದಿಷ್ಟು ನಿಯಂತ್ರಣಕ್ಕೆ ಬಂದಿದ್ದರಿಂದ ಮತ್ತು ಲಸಿಕೆಯ ಬಗೆಗೆ ಕೆಲವೊಂದು ಗೊಂದಲಗಳಿದ್ದುದರಿಂದ ಆರಂಭದ ಕೆಲವು ವಾರಗಳ ಕಾಲ ಲಸಿಕೆ ಪಡೆದುಕೊಳ್ಳಲು ಜನರು ಹಿಂದೇಟು ಹಾಕಿದರು. ಎ.1ರಿಂದ 45ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಯಿತು. ಈ ಹಂತದಲ್ಲಿ ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಿಸಿ ಭಾರೀ ಸಂಕಷ್ಟವನ್ನು ತಂದೊಡ್ಡಿತ್ತಲ್ಲದೆ ಅಪಾರ ಪ್ರಾಣಹಾನಿಗೂ ಕಾರಣವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ