ಬೆಂಗಳೂರು: ದೆಹಲಿಯಲ್ಲಿ ಬೀದಿ ನಾಯಿಗಳನ್ನು ಹುಡುಕಿ ಎತ್ತಂಗಡಿ ಮಾಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶ ಈಗ ಚರ್ಚೆಗೆ ಕಾರಣವಾಗಿದೆ. ಬೀದಿ ನಾಯಿಗಳ ಪರವಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ ಇದಕ್ಕೇನಾ ಬಿರಿಯಾನಿ ಕೊಡ್ತಿರೋದು ಎಂದು ಕಾಲೆಳೆದಿದ್ದಾರೆ.
ದೆಹಲಿಯಲ್ಲಿ ಬೀದಿ ನಾಯಿಗಳ ಕಡಿತ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಎಲ್ಲಾ ಬೀದಿ ನಾಯಿಗಳನ್ನೂ ಆಶ್ರಯ ಕೇಂದ್ರಗಳಿಗೆ ಸಾಗಿಸುವಂತೆ ಆದೇಶ ನೀಡಿದೆ. ಈ ಬಗ್ಗೆ ಪ್ರಾಣಿಪ್ರಿಯರು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಸದೆ ಪ್ರಿಯಾಂಕ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ ಬೀದಿ ನಾಯಿಗಳ ವಿರುದ್ಧ ಸುಪ್ರೀಂಕೋರ್ಟ್ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಕೂಡಾ ರಾಹುಲ್ ಟ್ವೀಟ್ ರಿಟ್ವೀಟ್ ಮಾಡಿದ್ದು, ಬೀದಿ ನಾಯಿಗಳನ್ನು ಎತ್ತಂಗಡಿ ಮಾಡುವುದು ಕ್ರೌರ್ಯ. ಅವುಗಳನ್ನು ಕರುಣೆಯಿಂದ ನೋಡಬೇಕು. ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ, ವ್ಯಾಕ್ಸಿನೇಷನ್ ನೀಡುವ ಮೂಲಕ ಅವುಗಳಿಂದ ಮನುಷ್ಯರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್ ಗೆ ನೆಟ್ಟಿಗರು ಸ್ವಾರಸ್ಯಕರವಾಗಿ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಬಿಬಿಎಂಪಿ ಬೆಂಗಳೂರಿನ ಬೀದಿ ನಾಯಿಗಳಿಗೆ ಬಿರಿಯಾನಿ ಕೊಡಲು ತೀರ್ಮಾನಿಸಿತ್ತು. ಅದನ್ನೇ ಮುಂದಿಟ್ಟುಕೊಂಡು ಈಗ ನೆಟ್ಟಿಗರು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಬಾಸ್ ಅದಕ್ಕೇನಾ ಬೆಂಗಳೂರಿನ ಬೀದಿ ನಾಯಿಗಳಿಗೆ ಬಿರಿಯಾನಿ ಕೊಡ್ತಿರೋದು ಎಂದಿದ್ದಾರೆ. ಇನ್ನು ಕೆಲವರು ನೀವೇನೋ ಕಾರಿನಲ್ಲಿ ಭದ್ರತೆಯಲ್ಲಿ ಓಡಾಡ್ತೀರಿ. ಆದರೆ ಬೀದಿಯಲ್ಲಿ ಓಡಾಡುವ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನೆ ಮಾಡಿದ್ದಾರೆ.