ಗುಜರಾತ್ : ನಾದಿನಿಯ ಮೇಲಿನ ವ್ಯಾಮೋಹದಿಂದ ಪತಿಯೋರ್ವ ತನ್ನ ಏಡ್ಸ್ ಪೀಡಿತ ಪತ್ನಿಯನ್ನು ಹತ್ಯೆ ಮಾಡಿದ ಭಯಾನಕ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ.
ಈ ಕೊಲೆಯಾಗುವ ಒಂಭತ್ತು ತಿಂಗಳ ಮೊದಲೇ ಆರೋಪಿ ತನ್ನ ಪತ್ನಿಯ ತಂಗಿಯ ಜೊತೆ ಓಡಿ ಹೋಗಿದ್ದ. ಕೊಲೆಯಾದ ನತದೃಷ್ಟ ಮಹಿಳೆಯನ್ನು ರಂಜನಾ ಎಂದು ಗುರುತಿಸಲಾಗಿದೆ. ರಾಜೇಶ್ ಒರಾಖಿಯಾ ಕೊಲೆ ಮಾಡಿದ ಆರೋಪಿ. ಪತ್ನಿಯ ಹತ್ಯೆ ಬಳಿಕ ಆತ ಪತ್ನಿಯ ತಂಗಿಯನ್ನು ಮದುವೆಯಾಗಲು ಬಯಸಿದ್ದ.
ಮೇ ತಿಂಗಳಲ್ಲಿಯೇ ಈ ಕೊಲೆ ನಡೆದಿತ್ತು. ಆರೋಪಿ ರಾಜೇಶ್ ಪತ್ನಿ ರಂಜನಾಳನ್ನು ಕೊಂದ ಬಳಿಕ ಆಕೆಯ ಶವವನ್ನು ವಿಚಿಯ ತಾಲೂಕಿನ ದಾದಾಲಿ ಗ್ರಾಮದ ಹೊರವಲಯದಲ್ಲಿ ಹೂತಿಟ್ಟಿದ್ದ. ಈಗ ಪೊಲೀಸರು ಆರೋಪಿ ರಾಜೇಶ್ ಒರಾಖಿಯಾನನ್ನು ಬಂಧಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಆರೋಪಿಯನ್ನು ಬಂಧಿಸುವಂತೆ ಕೋರಿ ಸಂತ್ರಸ್ತೆಯ ಕುಟುಂಬವು ಮಮ್ಲತ್ದಾರ್ (ಆಡಳಿತ) ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು.
ಆರೋಪಿಯು ತನ್ನ ಪತ್ನಿಯ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗಲು ಬಯಸಿದ್ದರಿಂದ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಶ್ ಅವರ ಪತ್ನಿ ರಂಜನ್ ಏಡ್ಸ್ ನಿಂದ ಬಳಲುತ್ತಿದ್ದರು.
ಆರು ವರ್ಷಗಳ ಹಿಂದೆ ವಿವಾಹವಾದ ರಾಜೇಶ್ ಹಾಗೂ ರಂಜನಾ ದಂಪತಿಗೆ ಒಬ್ಬ ಮಗನಿದ್ದಾನೆ. ಕಳೆದ ವರ್ಷ ಮಹಿಳೆಗೆ ಏಡ್ಸ್ ಇರುವುದು ಪತ್ತೆಯಾಗಿತ್ತು. ಹೆಂಡತಿಗೆ ಏಡ್ಸ್ ಇರುವುದು ತಿಳಿದ ನಂತರ, ಆರೋಪಿ ರಾಜೇಶ್, ಪತ್ನಿ ರಂಜನಾಳ ತಂಗಿ ಇಂದೂ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಲ್ಲದೇ, ಆಕೆಯೊಂದಿಗೆ 9 ತಿಂಗಳ ಹಿಂದೆ ಓಡಿ ಹೋಗಿದ್ದ. ಇದರಿಂದ ಮನನೊಂದ ರಂಜನಾ ಗಂಡನ ಮನೆತೊರೆದು ಪೋಷಕರೊಂದಿಗೆ ವಾಸವಾಗಿದ್ದಳು. ಆದರೆ ಇತ್ತೀಚೆಗೆ ಮರಳಿ ಬಂದ ಆತ ತನ್ನ ಪತ್ನಿಯನ್ನು ವಾಪಸ್ ಬರುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ.
ಮನೆಗೆ ಬಂದ ಒಂದು ತಿಂಗಳ ನಂತರ ರಂಜನಾಳನ್ನು ಮೊಬೈಲ್ ಫೋನ್ ಚಾರ್ಜರ್ ವೈರ್ನಿಂದ ಕತ್ತು ಬಿಗಿದು ಕೊಲೆ ಮಾಡಿ ನಂತರ ಶವವನ್ನು ಹೂತು ಹಾಕಿದ್ದ. ಶವ ಹೂತು ಹಾಕಿದ ಬಳಿಕ ಆರೋಪಿ ರಾಜೇಶ್ ತನ್ನ ಪತ್ನಿ ಚಿನ್ನಾಭರಣಗಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಆದರೆ ಪತ್ನಿ ರಂಜನಾಳ ತಂದೆ ರಂಜನಾಳನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ್ದರು.