ಉತ್ತರಪ್ರದೇಶ : ಕೊರೊನಾ ಸಾಂಕ್ರಾಮಿಕ ಪ್ರಸರಣದ ಭೀತಿಯಲ್ಲಿ ದೇಶ ಮುಳುಗಿದ್ದು, ಮೂರನೇ ಅಲೆ ಶುರುವಾಗುವ ಆತಂಕದಲ್ಲಿದ್ದರೆ ಉತ್ತರಪ್ರದೇಶದ ಲಖನೌನಲ್ಲಿ ಮಾತ್ರ ವಿಚಿತ್ರ ರೂಪದ ವೈರಲ್ ಜ್ವರದ ಹಾವಳಿ ಹೆಚ್ಚಿದೆ. ಹವಾಮಾನ ಬದಲಾವಣೆ ವೇಳೆ ಈ ಜ್ವರ ಸಾಮಾನ್ಯ ಎಂದು ವೈದ್ಯರುಗಳು ಸಮಜಾಯಿಷಿ ನೀಡುತ್ತಿದ್ದರೂ, 40 ಮಕ್ಕಳಲ್ಲಿ ಜ್ವರದ ಗಂಭೀರ ಸ್ವರೂಪ ಕಂಡುಬಂದಿರುವುದು ಜನಸಾಮಾನ್ಯರನ್ನು ಚಿಂತೆಗೆ ದೂಡಿದೆ.
ಸರಕಾರಿ ಆಸ್ಪತ್ರೆಗಳ ಒಪಿಡಿಗೆ ಬರುವ ರೋಗಿಗಳಲ್ಲಿ ಕನಿಷ್ಠ 20% ಮಂದಿಗೆ ಜ್ವರ, ಶೀತ ಮತ್ತು ಕಫದ ಲಕ್ಷಣಗಳು ಕಂಡುಬರುತ್ತಿವೆ. ಇವರಿಗೆಲ್ಲ ಕೋವಿಡ್-19 ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದ್ದು, ವರದಿ ಮಾತ್ರ ನೆಗೆಟಿವ್ ಇದೆ.
ವೈರಲ್ ಜ್ವರ, ಡೆಂಗ್ಯೂ ಬಾಧಿತರು ಹೆಚ್ಚಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಕೆಳಹಂತದ ವಾತಾವರಣದಲ್ಲಿ ಈ ಹವಾಮಾನದ ವೇಳೆ ವೈರಾಣುಗಳ ಪ್ರಮಾಣ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ. ಆದರೂ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಸರಕಾರಿ ಆಸ್ಪತ್ರೆಯ ನಿರ್ದೇಶಕಿ ಡಾ. ಎಸ್.ಕೆ. ನಂದಾ ತಿಳಿಸಿದ್ದಾರೆ.