ಅಪಹರಣವಾಗಿದ್ದ ಹುಡುಗಿ 10 ವರ್ಷದ ಬಳಿಕ ಮನೆಗೆ ಮರಳಿ ಬಿಚ್ಚಿಟ್ಟ ಘೋರ ಸತ್ಯ

ಬುಧವಾರ, 3 ಆಗಸ್ಟ್ 2016 (14:37 IST)
ಇದು ನೀವೆಂದೂ ಕೇಳರಿಯದ ಕರುಣಾಜನಕ ಕಥೆ. ದೇಶಾದ್ಯಂತ ವ್ಯಾಪಿಸಿರುವ ಅಮಾಯಕ ಹೆಣ್ಣು ಮಕ್ಕಳ ಸಾಗಾಣಿಕೆಯ ಕರಾಳ ಪುಟದ ಅನಾವರಣ. 10 ವರ್ಷಗಳ ಕಾಲ ಪಡಬಾರದ ಕಷ್ಟ ಪಟ್ಟು, ಪ್ರತಿದಿನ, ಪ್ರತಿ ಕ್ಷಣ ಸತ್ತು ಸತ್ತು ಜೀವಂತ ಶವವಾಗಿ ಮನೆಗೆ ಮರಳಿದ ಚಿಕ್ಕ ವಯಸ್ಸಿನ ಹೆಣ್ಣೊಬ್ಬಳ ಕಣ್ಣೀರಿನ ಕಹಾನಿ.

ಆ ಪುಟ್ಟ ಹುಡುಗಿಗೆ ಆಗಿನ್ನು (2006) 12 ರ ಪ್ರಾಯ. ಅದೊಂದು ದಿನ ಅಪರಿಚಿತರಿಂದ ಅಪಹರಣಕ್ಕೊಳಗಾದಳು. ಮಗಳು ನಾಪತ್ತೆಯಾಗಿರುವ ದೂರನ್ನು ದಾಖಲಿಸಿದ ಪೋಷಕರು ಆಕೆ ಸಿಗದಾದಾಗ ಸುಮ್ಮನಾದರು. ಇನ್ನು ಆಕೆಯನ್ನು ನೋಡಲಾರೆವು ಎಂದುಕೊಂಡಿದ್ದ ಪೋಷಕರಿಗೆ 10 ವರ್ಷದ ಬಳಿಕ ಮನೆಗೆ ಮರಳಿದ ಒಂದು ಕ್ಷಣ ಹೋಲಿಕೆ ಇಲ್ಲದ ಸಂತೋಷವಾದರೂ ಆಕೆಯ ದುರಂತ ಕಥೆಯನ್ನು ಕೇಳಿ ಅಷ್ಟೇ ಆಘಾತವೂ ಆಯಿತು. ಇದು ನಡೆದದ್ದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ.

ಬಾಲಕಿಯರನ್ನು, ಯುವತಿಯರನ್ನು ಅಪಹರಿಸಿ ದೇಶಾದ್ಯಂತ ಮಾರಾಟ ಮಾಡುತ್ತಿದ್ದ ಅಪಾಯಕಾರಿ ಗ್ಯಾಂಗ್ ಕಪಿಮುಷ್ಠಿಯಲ್ಲಿ ಸಿಕ್ಕಿ ಬಿದ್ದ ಬಾಲಕಿ ಅವರಿಂದ ಮಾರಾಟಕ್ಕೊಳಗಾಗಿ ಈ 10 ವರ್ಷಗಳಲ್ಲಿ ಸಹಿಸಲಾಗದ ದೈಹಿಕ, ಮಾನಸಿಕ,ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ ಎಂಬ ಘೋರ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಏನೂ ಅರಿಯದ ವಯಸ್ಸಿನಲ್ಲಿ ಪಡಬಾರದ ಕಷ್ಟವನ್ನೆಲ್ಲ ಕಂಡ ಬಾಲಕಿ ತನ್ನ ನೋವಿನ ಕಥೆಯನ್ನು ಹೀಗೆ ಹೇಳುತ್ತಾಳೆ: ನನ್ನದೇ ವಯಸ್ಸಿನ ಇತರ ಬಾಲಕಿಯರ ಜತೆಗೆ ಮೊದಲು ಪಂಜಾಬ್‌ಗೆ ಕರೆದೊಯ್ಯಲಾಯಿತು. ಬಳಿಕ ಗುಜರಾತ್‌ಗೆ ಸಾಗಿಸಲಾಯಿತು. ಈ 10 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರು. ನಾನು ಪ್ರತಿಭಟಿಸಿದಾಗ ಚಾಕುವಿನಿಂದ ಹಲ್ಲೆ ಮಾಡಲಾಯಿತು. ರಾಡ್‌ನಿಂದ ದಾಳಿ ನಡೆಸಲಾಯಿತು.ಸಿಗರೇಟ್‌ನಿಂದ ಸುಡಲಾಯಿತು.

ಗುಜರಾತ್‌ನಲ್ಲಿ ಕುಟುಂಬವೊಂದಕ್ಕೆ ನನ್ನನ್ನು ಮಾರಲಾಯಿತು. ಆ ಕುಟುಂಬದವರು ವ್ಯಕ್ತಿಯೊಬ್ಬನ ಜತೆ ನನ್ನ ಮದುವೆ ಮಾಡಿದರು. ಮದುವೆಯಾದ ಕೆಲವೇ ತಿಂಗಳಲ್ಲಿ ಆತ ತೀರಿಕೊಂಡ. ಆತನಿಂದ ನನಗೆ ಇಬ್ಬರು ಮಕ್ಕಳಾದರು. ಬಳಿಕ ಮಕ್ಕಳನ್ನು ಅಲ್ಲಿಯೇ ಬಿಟ್ಟು ಮನೆ ಬಿಟ್ಟು ಹೋಗುವಂತೆ ನನ್ನನ್ನು ಕೊಂಡುಕೊಂಡ ಕುಟುಂಬ ಹೇಳಿತು. ಬೇರೆ ಮಾರ್ಗವಿಲ್ಲದೆ ನಾನು ಅಲ್ಲಿಂದ ಹೊರ ಬಂದೆ ಎಂದಾಕೆ ಪೊಲೀಸರ ಬಳಿ ಎಲ್ಲ ವಿಷಯವನ್ನು ಬಹಿರಂಗ ಪಡಿಸಿದ್ದಾಳೆ.

ಆಕೆಯ ದೇಹದ ಮೇಲೆಲ್ಲ ಸಿಗರೇಟ್‌ನಿಂದ ಸುಟ್ಟ, ಹಲ್ಲೆ ನಡೆಸಿದ ಗುರುತುಗಳಿವೆ.

2006ರಲ್ಲಿಯೇ ಆಕೆಯನ್ನು ಅಪಹರಿಸಿದ ಪ್ರಕರಣ ದಾಖಲಾಗಿತ್ತು. ಮತ್ತೀಗ ಐಪಿಸಿ ವಿಭಾಗ 376( ಅತ್ಯಾಚಾರ) ಸೇರಿದಂತೆ ಅನೇಕ ವಿಭಾಗಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ