ರೈಲು ಅಪಘಾತ ದುರಂತ : ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರು ಸಾವು
ಗುರುವಾರ, 8 ಜೂನ್ 2023 (13:04 IST)
ಭುವನೇಶ್ವರ : ಒಡಿಶಾದಲ್ಲಿ ನಡೆದ ತ್ರಿವಳಿ ರೈಲು ಅಪಘಾತದ ಬೆನ್ನಲ್ಲೇ, ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರು ಸಾವನ್ನಪ್ಪಿದ ಘಟನೆ ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಕಾರ್ಮಿಕರು ಜಾಜ್ಪುರ ಕಿಯೋಂಜರ್ ರಸ್ತೆ ರೈಲು ನಿಲ್ದಾಣದಲ್ಲಿ ರೈಲ್ವೆ ಸೈಡಿಂಗ್ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭ ಏಕಾಏಕಿ ಗುಡುಗು ಸಹಿತ ಮಳೆಯಾಗಿದ್ದರಿಂದ ಅಲ್ಲೇ ನಿಂತಿದ್ದ ಗೂಡ್ಸ್ ರೈಲಿನ ಅಡಿಯಲ್ಲಿ ಆಶ್ರಯ ಪಡೆದಿದ್ದಾರೆ. ದುರಾದೃಷ್ಟವಶಾತ್ ರೈಲಿಗೆ ಎಂಜಿನ್ ಜೋಡಿಸಿರಲಿಲ್ಲ. ಜೋರು ಮಳೆಯಿಂದಾಗಿ ರೈಲು ಚಲಿಸಲು ಪ್ರಾಂಭಿಸಿದ್ದು, ಅದರ ಅಡಿಯಲ್ಲಿ ಆಶ್ರಯ ಪಡೆದಿದ್ದ ಕಾರ್ಮಿಕರು ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಇಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಟಕ್ನಲ್ಲಿರುವ ಎಸ್ಸಿಬಿ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಗಾಯಗೊಂಡಿರುವ ಕಾರ್ಮಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಂಬಧಂಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.