ಕಾಲ್ತುಳಿತ ಪ್ರಕರಣ: ಬೆಳಗಾವಿಯಲ್ಲಿ ಮುಗಿಲುಮುಟ್ಟಿದ ಆಕ್ರಂದನದ ಮಧ್ಯೆ ತಾಯಿ-ಮಗಳ ಅಂತ್ಯಕ್ರಿಯೆ

Sampriya

ಶುಕ್ರವಾರ, 31 ಜನವರಿ 2025 (14:44 IST)
Photo Courtesy X
ಬೆಳಗಾವಿ: ಪ್ರಯಾಗ್‌ರಾಜನಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ ಬೆಳಗಾವಿಯ ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಟ, ಅವರ ಪುತ್ರಿ ಮೇಘಾ ಅವರ ಅಂತ್ಯಸಂಸ್ಕಾರ ಇಲ್ಲಿ‌ನ ಶಹಾಪುರ ಸ್ಮಶಾನದಲ್ಲಿ ಶುಕ್ರವಾರ ಬೆಳಿಗ್ಗೆ ನೆರವೇರಿತು.

ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತು. ಬ್ರಾಹ್ಮಣ ಸಂಪ್ರದಾಯದಂತೆ ವಿಧಿ- ವಿಧಾನಗಳನ್ನು ಪೂರೈಸಲಾಯಿತು. ಜ್ಯೋತಿ ಅವರ ಪತಿ ದೀಪಕ್ ಇಬ್ಬರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು‌. ಪುಣ್ಯಸ್ನಾನಕ್ಕೆ ಹೋದ ತಾಯಿ,‌ ಮಗಳು ಶವವಾಗಿ ಬಂದಿದ್ದು ಕಂಡು ಕುಟುಂಬದವರು ದುಃಖದಲ್ಲಿ ಮುಳುಗಿದರು. ನಸುಕಿನಲ್ಲೂ ಅಪಾರ ಜ‌ನ ಅವರ ಮನೆಗೆ ಧಾವಿಸಿ ಅಂತಿಮ ನಮನ ಸಲ್ಲಿಸಿದರು.

ಜ.28ರಂದು ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ತಾಯಿ,‌ ಮಗಳು ಸೇರಿ ನಾಲ್ವರು ಸಾವಿಗೀಡಾದರು‌. ಅರುಣ‌ ಕೋಪರ್ಡೆ ‌ಹಾಗೂ ಮಹಾದೇವಿ ಬಾವನೂರ ಅವರ ಶವಗಳನ್ನು ಗುರುವಾರ ಸಂಜೆಗೆ ಏರ್ ಲಿಫ್ಟ್ ಮಾಡಿ ಬೆಳಗಾವಿ ತರಲಾಯಿತು. ರಾತ್ರಿಯೇ ಅವರ ಅಂತ್ಯಕ್ರಿಯೆ ನೆರವೇರಿತು.

ಜ್ಯೋತಿ ಹಾಗೂ ಮೇಘಾ ಅವರ ಶವಗಳನ್ನು ದೆಹಲಿಯಿಂದ ಗೋವಾಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ಆಂಬುಲೆನ್ಸ್ ಮೂಲಕ ಬೆಳಗಾವಿಗೆ ತರಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.‌ ಅಷ್ಟೊತ್ತಿಗೆ ಶುಕ್ರವಾರ ನಸುಕಿನ 4 ಗಂಟೆಯಾಗಿತ್ತು.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ