ನವದೆಹಲಿ : ಟ್ವಿಟ್ಟರ್ ಕಂಪನಿ 2020 ರಿಂದ ಭಾರತದ ಕಾನೂನು ಪಾಲನೆ ಮಾಡಿರಲಿಲ್ಲ. ಅಂತಿಮವಾಗಿ ಅವರು ಕಾನೂನು ಪಾಲನೆ ಮಾಡಿರುವುದು 2022ರ ಜೂನ್ನಲ್ಲಿ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಖಾತೆಯ ಸಚಿವ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.
ಟ್ವಿಟ್ಟರ್ ಕಂಪನಿಯನ್ನು ಸ್ಥಗಿತಗೊಳಿಸಲು ಭಾರತ ಸರ್ಕಾರದಿಂದ ಒತ್ತಡ ಬಂದಿತ್ತು ಎಂಬ ಮಾಜಿ ಸಿಇಒ ಜಾಕ್ ಡಾರ್ಸಿ ಆರೋಪ ಸಂಪೂರ್ಣ ಸುಳ್ಳು ಎಂದಿದ್ದಾರೆ.
ಜಾಕ್ ಡಾರ್ಸಿ ಮತ್ತು ಅವರ ತಂಡವು ಭಾರತದ ಕಾನೂನನ್ನು ನಿರಂತರ ಉಲ್ಲಂಘನೆ ಮಾಡುತ್ತಿತ್ತು. ಅವರ ಕಂಪನಿಯ ಉದ್ಯೋಗಿಗಳು ಯಾರು ಜೈಲಿಗೆ ಹೋಗಲಿಲ್ಲ. ಟ್ವಿಟ್ಟರ್ ಕಂಪನಿಯನ್ನು ಸ್ಥಗಿತಗೊಳಿಸಿಲ್ಲ ಎಂದು ಹೇಳಿದರು.
ಡಾರ್ಸಿ ಅವಧಿಯಲ್ಲಿ ಟ್ವಿಟ್ಟರ್ ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಲ್ಲಿ ಸಮಸ್ಯೆಯನ್ನು ಹೊಂದಿತ್ತು. ಭಾರತದ ಕಾನೂನುಗಳು ತನಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸಿತ್ತು. ಸಾರ್ವಭೌಮ ರಾಷ್ಟ್ರವಾಗಿರುವ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಂಪನಿಗಳು ತನ್ನ ಕಾನೂನುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದಿದ್ದಾರೆ.