ಶ್ರೀಲಂಕಾದಲ್ಲಿ ತೈಲ ಪೂರೈಕೆಯಿಂದ ಹಿಂಸಾತ್ಮಕ ಪ್ರತಿಭಟನೆ !
ಶುಕ್ರವಾರ, 1 ಏಪ್ರಿಲ್ 2022 (09:17 IST)
ಕೊಲಂಬೊ : ಸುಮಾರು ಒಂದು ವಾರದಿಂದಲೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತೈಲ ಪೂರೈಕೆಯಲ್ಲಿ ಕೊರತೆಯುಂಟಾಗಿದ್ದು ಡೀಸೆಲ್ ಮಾರಾಟವನ್ನೇ ಸ್ಥಗಿತಗೊಳಿಸಲಾಗಿದೆ.
ಇದರಿಂದ ಸಾರ್ವಜನಿಕರ ಆಕ್ರೋಶವು ಮಿತಿ ಮೀರಿದ್ದು, ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಅಡುಗೆ ಅನಿಲ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಗೆ ಲಂಕಾ ಅಧ್ಯಕ್ಷ ರಾಜಪಕ್ಸೆ ಅವರ ನೀತಿಗಳೇ ಕಾರಣ ಎಂದು ಆರೋಪಿಸಿ ಗುರುವಾರ ತಡರಾತ್ರಿ 5 ಸಾವಿರಕ್ಕೂ ಹೆಚ್ಚು ಮಂದಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿವಾಸದ ಮುಂದೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಅವರ ರಾಜೀನಾಮೆಗೂ ಒತ್ತಾಯಿಸಿರುವ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಗಿದೆ.
ಆಕ್ರೋಶಭರಿತ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಐವರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಪೊಲೀಸ್ ಜೀಪ್, 2 ಬೈಕ್ಗಳು ಹಾಗೂ ವಾಟರ್ ಕೆನನ್ ಟ್ರಕ್ ಅನ್ನು ಸುಟ್ಟುಹಾಕಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.