ನವದೆಹಲಿ: ಬಹು ಚರ್ಚಿತ ವಕ್ಫ್ ಮಸೂದೆ ಈಗ ರಾಜ್ಯಸಭೆಯಲ್ಲೂ ಪಾಸ್ ಮಾಡಲಾಗಿದೆ. ನಿನ್ನೆ ತಡರಾತ್ರಿ ಮತಕ್ಕೆ ಹಾಕಲಾಯಿತು. ಬಳಿಕ ಬಹುತಮಗಳೊಂದಿಗೆ ಮಸೂದೆ ಪಾಸ್ ಆಗಿದೆ.
ಮಸೂದೆಯ ಪರವಾಗಿ ಒಟ್ಟು 135 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಬಂದಿವೆ. ಇದೀಗ ಮಸೂದೆ ಕಾನೂನಾಗಲು ಒಂದೇ ಮೆಟ್ಟಿಲು ಬಾಕಿಯಿದೆ. ಲೋಕಸಭೆಯಲ್ಲಿ ಮೊನ್ನೆ ತಡರಾತ್ರಿ ಮಸೂದೆ ಪಾಸ್ ಆಗಿತ್ತು.
ಲೋಕಸಭೆಯಲ್ಲಿ ಸತತ 12 ಗಂಟೆಗಳ ಚರ್ಚೆಯ ಬಳಿಕ 288 ಮತಗಳೊಂದಿಗೆ ಮಸೂದೆ ಪಾಸ್ ಆಗಿತ್ತು. ಇದೀಗ ರಾಜ್ಯಸಭೆಯಲ್ಲೂ ಮಸೂದೆ ಪಾಸ್ ಆಗಿರುವುದರಿಂದ ಈಗ ರಾಷ್ಟ್ರಪತಿಗಳ ಅಂಕಿತವೊಂದೇ ಬಾಕಿ. ಇದಾದ ಬಳಿಕ ಮಸೂದೆ ಕಾನೂನಾಗಲಿದೆ.
ಲೋಕಸಭೆಯಲ್ಲಿದ್ದಂತೆ ರಾಜ್ಯಸಭೆಯಲ್ಲೂ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳಿಂದ ಮಸೂದೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ವಕ್ಫ್ ಮಸೂದೆಯನ್ನು ಮುಸ್ಲಿಮರಿಗೆ ಕಿರುಕುಳ ನೀಡಲೆಂದೇ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.