ಉಗ್ರರನ್ನು ಎರಡುವರೆ ಅಡಿ ಆಳದಲ್ಲಿ ಹೂತು ಹಾಕ್ತೇವೆ: ಸೇನಾ ಮುಖ್ಯಸ್ಥ

ಮಂಗಳವಾರ, 26 ಸೆಪ್ಟಂಬರ್ 2017 (15:58 IST)
ನೆರೆಯ ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಲು ದೇಶದ ಗಡಿಗಳಲ್ಲಿ ಸ್ಥಾಪಿಸಲಾಗಿರುವ ಉಗ್ರರ ತಾಣಗಳ ಮೇಲೆ ಅಗತ್ಯವಾದಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಸಿದ್ದ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.  
ಪಾಕಿಸ್ತಾನ ದೇಶದ ಗಡಿಯಲ್ಲಿ ಉಗ್ರರ ಶಿಬಿರಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಉಗ್ರರು ದೇಶದೊಳಗೆ ನುಗ್ಗುವುದು ಮುಂದುವರಿದಿದೆ. ಉಗ್ರರು ದೇಶದೊಳಗೆ ಪ್ರವೇಶಿಸುತ್ತಿದ್ದಂತೆ ಅವರನ್ನು ಸಮಾಧಿ ಮಾಡಲು ಸೇನೆ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.
 
ಪಾಕಿಸ್ತಾನಕ್ಕೆ ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ದ ಎನ್ನುವ ಸಂದೇಶ ಸಾರಲು ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು. ಪಾಕಿಸ್ತಾನಕ್ಕೆ ನಾವು ಏನು ಹೇಳಬೇಕು ಎಂದು ಬಯಸಿದ್ದೇವೆಯೋ ಅದು ಅರ್ಥವಾಗಿದೆ. ಅಗತ್ಯವಾದಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.  
 
ರಕ್ಷಣಾ ವಿಭಾಗದ ಪತ್ರಕರ್ತರು ಬರೆದಿರುವ  ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ ಶೀರ್ಷಿಕೆಯಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಪಿನ್ ರಾವತ್ ಪಾಲ್ಗೊಂಡು ಮಾತನಾಡಿದರು.
 
ಪುಸ್ತಕದಲ್ಲಿ ಸೈನಿಕರ ವೈಯಕ್ತಿಕ ವಿವರಗಳು ಮತ್ತು ತೀವ್ರ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಅವರ ಶೌರ್ಯವನ್ನು ನಿರೂಪಿಸಲಾಗಿದೆ. ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಪಾಲ್ಗೊಂಡ ಅಧಿಕಾರಿಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ